

ರಷ್ಯಾ: ಅನ್ನಾ ತುರೈವಾ ರಷ್ಯಾದ ವಿಶ್ವಪ್ರಸಿದ್ಧ ಪವರ್ಲಿಫ್ಟರ್. ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಪವರ್‌ಲಿಫ್ಟಿಂಗ್‌ನಲ್ಲಿ ಅನೇಕ ದಾಖಲೆಗಳನ್ನು ಹೊಂದಿರುವ 42 ವರ್ಷದ ಅನ್ನಾಗೆ ಇಡೀ ವಿಶ್ವವೇ ಮೆಚ್ಚುಗೆ ಸೂಸುತ್ತಿದ್ದರೆ, ವಿಮಾನ ನಿಲ್ದಾಣದಲ್ಲಿ ಮಾತ್ರ ಈಕೆ ಸಂಕಟ ಅನುಭವಿಸಿರುವ ಘಟನೆ ನಡೆದಿದೆ.
ಇದಕ್ಕೆ ಕಾರಣ, ಅನ್ನಾ ನೋಡಲು ಪುರುಷರಂತೆ ಕಾಣಿಸುವ ಕಾರಣ, ತಾನು ಮಹಿಳೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿಗೆ ಸಾಬೀತು ಮಾಡಬೇಕಾಗಿ ಬಂದ ದುರದೃಷ್ಟಕರ ಘಟನೆ ನಡೆದಿದೆ!
ತಾವು ಮಹಿಳೆ ಎಂದು ಸಾಬೀತುಪಡಿಸುವವರೆಗೂ ವಿಮಾನ ಹತ್ತಲು ಹೇಗೆ ತಡೆಯಲಾಯಿತು ಎಂಬ ಆಘಾತಕಾರಿ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.
ಸೇಂಟ್ ಪೀಟಸ್ಬರ್ಗ್ನಿಂದ ನನ್ನ ತವರು ನಗರವಾದ ಕ್ರಾಸ್ನೋದರ್‌ಗೆ ಹೋಗುತ್ತಿದ್ದೆ. ಇದಕ್ಕಾಗಿ ನಾನು ವಿಮಾನ ನಿಲ್ದಾಣಕ್ಕೆ ಹೋದೆ. ಆದರೆ ಅಲ್ಲಿ ನಡೆದದ್ದು ತುಂಬಾ ಆಘಾತವನ್ನು ನೀಡಿತು. ನನ್ನ ಪಾಸ್ಪೋರ್ಟ್ ಅನ್ನು ಚೆಕ್ಪಾಯಿಂಟ್ನಲ್ಲಿ ಪರಿಶೀಲನೆ ಮಾಡಲಾಯಿತು. ಅದರಲ್ಲಿ 'ಮಹಿಳೆ' ಎಂದು ಬರೆದಿರುವುದನ್ನು ನೋಡಿದ ಭದ್ರತಾ ಸಿಬ್ಬಂದಿ ನನ್ನನ್ನು ಅಲ್ಲಿಯೇ ತಡೆದರು.
ಚಿತ್ರ- ವಿಚಿತ್ರವಾದ ಸವಾಲುಗಳನ್ನು ಅವರು ನನ್ನ ಮೇಲೆ ಎಸೆದರು. ಎಲ್ಲದ್ದಕ್ಕೂ ನಾನು ಉತ್ತರಿಸಿದರೂ, ನಾನೊಬ್ಬ ಮಹಿಳೆ ಎಂದು ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ನನಗೆ ತೀರಾ ಅವಮಾನವಾಯಿತು. ಸರದಿಯಲ್ಲಿರುವ ಜನರ ಮುಂದೆ ನನ್ನನ್ನು ಹೀಯಾಳಿಸಲಾಯಿತು.
ಅಷ್ಟೇ ಅಲ್ಲದೇ ನಾನು ಹಾಸಿಗೆಯಲ್ಲಿ ಹೇಗೆ ಎನ್ನುವುದನ್ನು ತಿಳಿದುಕೊಳ್ಳುವ ಉತ್ಸಾಹ ಅವರಲ್ಲಿ ಇದ್ದಂತೆ ತೋರುತ್ತಿತ್ತು. ನನಗೆ ಇದು ತೀರಾ ಆಘಾತವನ್ನು ಉಂಟುಮಾಡಿತು. ನಂತರ ನಾನು ಅವರ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಕೊನೆಗೂ ನನ್ನನ್ನು ಬಿಡಲಾಯಿತು...
ಹೀಗೆ ಆಘಾತಕಾರಿ ವಿಷಯವನ್ನು ಅನ್ನಾ ಹೇಳಿಕೊಂಡಿದ್ದಾರೆ.
ನಂತರ ಈ ವಿಷಯವು ವಿಮಾನನಿಲ್ದಾಣದ ಪ್ರಾಧಿಕಾರದ ಗಮನಕ್ಕೆ ಹೋಗಿದೆ. ಪ್ರಾಧಿಕಾರವು ಅನ್ನಾ ಅವರಿಗೆ ಪತ್ರ ಬರೆಯುವ ಮೂಲಕ ಕ್ಷಮೆ ಕೋರಿದೆ.
"ನೀವು ಅನುಭವಿಸಿದ ಹಿಂಸೆಗೆ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಮೇಲೆ ನಡೆದಿರುವ ಈ ಘಟನೆ ಸ್ವೀಕಾರಾರ್ಹವಲ್ಲ. ವಿಮಾನ ನಿಲ್ದಾಣದ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ದಯವಿಟ್ಟು ಕ್ಷಮಿಸಿ' ಎಂದು ಬರೆದಿದ್ದಾರೆ.