

ಮುಂಬೈ: ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿಯವರು 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಇದೀಗ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಅರ್ನಬ್ ಅವರಿಗೆ ಜಾಮೀನು ನೀಡಲು ನಿನ್ನೆ ಹೈಕೋರ್ಟ್ ನಿರಾಕರಿಸಿತ್ತು. ನೇರವಾಗಿ ಹೈಕೋರ್ಟ್ಗೆ ಬರುವ ಬದಲು, ಮೊದಲು ಸೆಷನ್ಸ್ ಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿತ್ತು. ಮಾತ್ರವಲ್ಲದೇ ಈ ಅರ್ಜಿಯ ವಿಚಾರಣೆಯನ್ನು ನಾಲ್ಕು ದಿನಗಳಲ್ಲಿ ಮುಗಿಸುವಂತೆ ಸೆಷನ್ಸ್ ಕೋರ್ಟ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದರು.
ಆದರೆ, ಈ ಆದೇಶ ಸರಿಯಾಗಿಲ್ಲ ಎಂದು ಆರೋಪಿಸಿರುವ ಅರ್ನಬ್ ಸುಪ್ರೀಂಕೋರ್ಟ್ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದಾರೆ.
ರಿಪಬ್ಲಿಕ್ ಟಿವಿ ಸ್ಟುಡಿಯೋ ನಿರ್ಮಿಸುವಾಗ ಅನ್ವಯ್ ನಾಯಕ್ ಅವರೇ ಇಂಟೀರಿಯರ್ ಡಿಸೈನಿಂಗ್ ಮಾಡಿಕೊಟ್ಟಿದ್ದರು. ಅದರ ಹಣ ನೀಡದೆ ಸತಾಯಿಸಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಅರ್ನಬ್ ಗೋಸ್ವಾಮಿ ವಿರುದ್ಧ ಕೇಳಿಬಂದಿದೆ.
ಈ ಪ್ರಕರಣದಲ್ಲಿ ಅಲಿಬೌಗ್‌ನ ಕೋರ್ಟ್ ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರನ್ನು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.