ಅರ್ನಬ್​ಗೆ ಸುತ್ತಿಕೊಂಡ ಆತ್ಮಹತ್ಯೆ ಪ್ರಕರಣ- ಸಾವಿನ ತನಿಖೆಗೆ ಕೋರಿ ಅರ್ಜಿ- ನೋಟಿಸ್​

arnab
Published on

ಮುಂಬೈ: ಟಿಆರ್​ಪಿ ತಿರುಚುವಿಕೆ, ಮಾನನಷ್ಟ ಮೊಕದ್ದಮೆ ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಹಲವು ಕೇಸುಗಳ ಸುಳಿಯಲ್ಲಿ ಸಿಲುಕಿರುವ ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ಇದೀಗ ಇನ್ನೊಂದು ಆಘಾತವಾಗಿದೆ.

ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯಕ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಅನ್ವಯ್​ ನಾಯಕ್​ ಅವರ ಮಗಳು ಆಜ್ಞಾ ಅವರು ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ತಂದೆಯವರ ಆತ್ಮಹತ್ಯೆ ಪ್ರಕರಣದ ಮರುತನಿಖೆ ನಡೆಸಬೇಕೆಂದು ಅವರು ಕೋರಿದ್ದಾರೆ.

"ಪೊಲೀಸರು ಈ ಅಪರಾಧವನ್ನು ಸರಿಯಾಗಿ ತನಿಖೆ ಮಾಡಿಲ್ಲ. ಆರೋಪಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸುಳ್ಳು, ನಕಲಿ, ಕಟ್ಟುಕಥೆಯಿಂದ ಕೂಡಿದ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ ಎಂದು ದೂರಿರುವ ಆಜ್ಞಾ ನಾಯಕ್​, ಆರೋಪಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ತನಿಖೆಯನ್ನು ಮೊಟಕುಗೊಳಿಸಿರುವ ಪೊಲೀಸ್‌ ಅಧಿಕಾರಿಗಳ ಬದಲಿಗೆ ಮುಂಬೈ ಕ್ರೈಂ ಬ್ರಾಂಚ್ ಅಥವಾ ಇನ್ನಾವುದೇ ಸ್ವತಂತ್ರ ತನಿಖಾ ಸಂಸ್ಥೆಗೆ ಪ್ರಕರಣವನ್ನು ವರ್ಗಾಯಿಸಬೇಕೆಂದು ಕೋರಿದ್ದಾರೆ.

ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಪ್ರತಿಕ್ರಿಯೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದ್ದು, ನೋಟಿಸ್​ ಜಾರಿಗೆ ಆದೇಶಿಸಿದೆ.

ಈ ಕೇಸ್​ನಲ್ಲಿ ತಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಿರುವುದಾಗಿ ದೂರು ಅರ್ನಬ್​ ಅವರು ಇದಾಗಲೇ ಸಲ್ಲಿಸಿರುವ ಅರ್ಜಿಯ ಜತೆಜತೆಗೇ ತಮ್ಮ ಅರ್ಜಿಯ ವಿಚಾರಣೆಯನ್ನೂ ಮಾಡುವಂತೆ ಅವರು ಕೋರಿಕೊಂಡಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂ ಎಸ್ ಕಾರ್ಣಿಕ್ ಅವರಿದ್ದ ಪೀಠ ವಿಚಾರಣೆಯನ್ನು ಮುಂದೂಡಿದೆ.

ಏನಿದು ಆತ್ಮಹತ್ಯೆ ಪ್ರಕರಣ? ಅರ್ನಬ್ ಗೋಸ್ವಾಮಿ ಮತ್ತು ಇನ್ನಿಬ್ಬರು ತಮಗೆ 5.4 ಕೋಟಿ ರೂ. ಹಣ ನೀಡಬೇಕು. ಆ ಹಣ ನೀಡಲು ಅವರು ಒಪ್ಪುತ್ತಿಲ್ಲ. ಇದರಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್‌ನೋಟ್ ಬರೆದಿಟ್ಟು ಅನ್ವಯ್ ನಾಯಕ್​ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ, ಅನ್ವಯ್ ಅವರ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ರಿಪಬ್ಲಿಕ್ ಟಿವಿ ಸ್ಟುಡಿಯೋ ನಿರ್ಮಿಸುವಾಗ ಅನ್ವಯ್ ನಾಯಕ್ ಅವರೇ ಇಂಟೀರಿಯರ್ ಡಿಸೈನಿಂಗ್ ಮಾಡಿಕೊಟ್ಟಿದ್ದರು. ಅದರ ಹಣ ನೀಡದೆ ಸತಾಯಿಸಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಅರ್ನಬ್ ಗೋಸ್ವಾಮಿ ವಿರುದ್ಧ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net