ಬೆದರಿಕೆಗೆ ₹1 ಸಾವಿರ, ಕೊಲೆ ಮಾಡಲು ₹55 ಸಾವಿರ... ಹಲವು 'ಸೇವೆ' ನಮ್ಮಲ್ಲಿ ಲಭ್ಯ...

rate fix1
Published on

ಲಖನೌ: ಬಹಳ ಹಿಂದಿನಿಂದಲೂ ಉತ್ತರ ಪ್ರದೇಶವನ್ನು ಗೂಂಡಾಗಳ ರಾಜ್ಯ ಎಂದೇ ಕರೆಯಲಾಗುತ್ತದೆ. ಇದು ಇಂದು, ನಿನ್ನೆಯ ಮಾತಲ್ಲ... ಆದ್ದರಿಂದ ಈ ರಾಜ್ಯದಲ್ಲಿ ಗೂಂಡಾಗಿರಿಯನ್ನು ಹತ್ತಿಕ್ಕಲು ಅಸ್ತಿತ್ವಕ್ಕೆ ಬರುವ ಸರ್ಕಾರಗಳ ಏನೆಲ್ಲಾ ಸರ್ಕಸ್‌ ಮಾಡುತ್ತಿದ್ದರೂ ಅಪರಾಧ ಲೋಕವನ್ನು ತಡೆಗಟ್ಟುವುದು ಇಲ್ಲಿ ಸಾಹಸಮಯ ಕೆಲಸವೇ ಸರಿ.

ಖುಲ್ಲಂಖುಲ್ಲಾ, ಜನರೆದರೂ ಕೊಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸಾಲದು ಎಂಬುದಕ್ಕೆ ಗ್ಯಾಂಗ್‌ ಒಂದು ಎಲ್ಲಾ ಅಪರಾಧಗಳಿಗೆ ರೇಟ್‌ ಫಿಕ್ಸ್‌ ಮಾಡಿ ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದೆ!ಉತ್ತರಪ್ರದೇಶದ ಮುಜಾಫರ್ ನಗರದ ಗ್ಯಾಂಗ್ ಒಂದು ಈ ದರವನ್ನು ಫಿಕ್ಸ್ ಮಾಡಿಕೊಂಡಿದ್ದು, ಅದನ್ನು ಯುವಕನೊಬ್ಬ ಶೇರ್‌ ಮಾಡಿದ್ದಾನೆ.

ಒಂದು ತಲೆ ತೆಗೆದರೆ ಎಷ್ಟು, ಕೊಲೆ ಮಾಡಿದರೆ ಎಷ್ಟು, ಕೇವಲ ಬೆದರಿಕೆ ಹಾಕಿದರೆ ಎಷ್ಟು, ಗೂಂಡಾಗಿರಿ ಮಾಡಿದರೆ ಎಷ್ಟು ಹೀಗೆ ಅನೇಕ ಅಪರಾಧಗಳಿಗೆ ರೇಟ್‌ ಫಿಕ್ಸ್‌ ಮಾಡಲಾಗಿದೆ. ಯುವಕನೊಬ್ಬ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಪೋಟೋ ಜತೆಗೆ ದರ ಪಟ್ಟಿ ವೈರಲ್ ಆಗಿದೆ.

ಹಣ ಪಡೆದು ಹೊಡೆದಾಟ ನಡೆಸುವುದು, ಜನರ ಮೇಲೆ ಹಲ್ಲೆ, ಅಪಹರಣ ಹಾಗೂ ಜಾಗದ ವಿಚಾರದಲ್ಲಿ ಬೆದರಿಕೆಯೊಡ್ಡುವುದು ಹಾಗೂ ಕೊಲೆ ಮಾಡುವ ಕೆಲಸ ಮಾಡಲಾಗುವುದು ಎಂದು ಪೋಸ್ಟರ್‌ನಲ್ಲಿ ತಿಳಿಸಲಾಗಿದೆ. ಅದರ ಪ್ರಕಾರ, ಕೇವಲ ಬೆದರಿಕೆ ಹಾಕುವುದಕ್ಕೆ 1000 ರೂಪಾಯಿ, ಹೊಡೆಯಬೇಕಾಗಿದ್ದರೆ 5000 ರೂಪಾಯಿ, ಗಾಯಗೊಳಿಸಲು ಹತ್ತು ಸಾವಿರ ರೂಪಾಯಿ ಹಾಗೂ ಕೊಲೆ ಮಾಡಲು 55 ಸಾವಿರ ರೂಪಾಯಿ ಎಂದು ದರ ಪಟ್ಟಿಯಲ್ಲಿ ನಮೂದಿಸಿರುವುದಾಗಿ ವರದಿ ವಿವರಿಸಿದೆ.

ಗೂಂಡಾಗಿರಿ ದರಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಯುವಕನನ್ನು  ಚೌಕಾಡಾ ಗ್ರಾಮದ ಚಾರಾತ್ವಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಎಂದು ಗುರುತಿಸಲಾಗಿದೆ. ರಾಜಸ್ಥಾನದಲ್ಲಿ ಈ ಗ್ಯಾಂಗ್‌ ಸಕ್ರೀಯವಾಗಿರುವುದಾಗಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇದೀಗ ಉತ್ತರ ಪ್ರದೇಶದಲ್ಲಿ ತಮ್ಮ ಜಾಲ ವಿಸ್ತಾರಕ್ಕೆ ಈ ರೀತಿ ಪೋಸ್ಟ್‌ ಹಾಕಿದ್ದಾರೆ ಎನ್ನಲಾಗಿದೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿ ವೈರಲ್ ಆದ ನಂತರ, ಯುವಕನ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net