ಕೈದಿಗಳಿಗೆ ಮೀಸಲಿಟ್ಟ ಕೋವಿಡ್‌ ಕೇಂದ್ರದಲ್ಲಿ ರಾತ್ರಿ ಕಳೆದ ಅರ್ನಬ್‌

arnab nyt
Published on

ಅಲಿಬೌಗ್: ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್​ ಮತ್ತು ಅವರ ತಾಯಿಯವರು 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಕೈದಿಗಳಿಗೆ ಮೀಸಲಿಟ್ಟ ಕೋವಿಡ್‌ ಕೇಂದ್ರದಲ್ಲಿ ರಾತ್ರಿ ಕಳೆದಿದ್ದಾರೆ.

ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಅರ್ನಬ್ ಗೋಸ್ವಾಮಿಯವರು ಕೋವಿಡ್-19 ಕೇಂದ್ರಕ್ಕೆ ಮೀಸಲಾಗಿದ್ದ ಶಾಲೆಯೊಂದರಲ್ಲಿ ರಾತ್ರಿ ಕಳೆದಿದ್ದಾರೆ. ಈ ಕೇಂದ್ರವನ್ನು ಮಹಾರಾಷ್ಟ್ರದ ರಾಯಗಢ್ ಜಿಲ್ಲೆಯಲ್ಲಿರುವ ಅಲಿಬೌಗ್‌ನ ಅಲಿಬೌಗ್ ಕಾರಾಗೃಹದ ಕೈದಿಗಳ ತಂಗುವಿಕೆಗೆ ನೀಡಲಾಗಿದೆ.

ಅರ್ನಬ್ ಗೋಸ್ವಾಮಿ ಮತ್ತು ಇನ್ನಿಬ್ಬರು ತಮಗೆ 5.4 ಕೋಟಿ ರೂ. ಹಣ ನೀಡಬೇಕು. ಆ ಹಣ ನೀಡಲು ಅವರು ಒಪ್ಪುತ್ತಿಲ್ಲ. ಇದರಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್‌ನೋಟ್ ಬರೆದಿಟ್ಟು ಅನ್ವಯ್ ನಾಯಕ್​ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ, ಅನ್ವಯ್ ಅವರ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ರಿಪಬ್ಲಿಕ್ ಟಿವಿ ಸ್ಟುಡಿಯೋ ನಿರ್ಮಿಸುವಾಗ ಅನ್ವಯ್ ನಾಯಕ್ ಅವರೇ ಇಂಟೀರಿಯರ್ ಡಿಸೈನಿಂಗ್ ಮಾಡಿಕೊಟ್ಟಿದ್ದರು. ಅದರ ಹಣ ನೀಡದೆ ಸತಾಯಿಸಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಅರ್ನಬ್ ಗೋಸ್ವಾಮಿ ವಿರುದ್ಧ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಅಲಿಬೌಗ್‌ನ ಕೋರ್ಟ್ ನಿನ್ನೆ ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರನ್ನು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಅರ್ನಬ್ ಅವರನ್ನು 14 ದಿನಗಳ ಕಸ್ಟಡಿಗೊಪ್ಪಿಸಲು ಅನುಮತಿ ನೀಡಬೇಕೆಂದು ಪೊಲೀಸರು ಕೇಳಿದ್ದರು. ಆದರೆ ಕಸ್ಟಡಿ ತನಿಖೆ ಅಗತ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ರಾತ್ರಿ ಅರ್ನಬ್‌ ಅವರನ್ನು ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ನಂತರ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಯೇ ಅವರು ರಾತ್ರಿ ಕಳೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net