

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನನ್ನು ವಿರೋಧಿಸಿ ಇದಾಗಲೇ ಭಾರಿ ಪ್ರತಿಭಟನೆ ನಡೆಯುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದು ಉಗ್ರ ಸ್ವರೂಪ ತಾಳಿದೆ.
ಈ ನಡುವೆಯೇ, ಕೇಂದ್ರದ ಮಾಜಿ ಸಚಿವ, ಮೂರು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಹಾಗೂ ಅಕಾಲಿ ದಳದ ಪ್ರಮುಖ ಪ್ರಕಾಶ್ ಸಿಂಗ್ ಬಾದಲ್ ಹಾಗೂ ರಾಜ್ಯಸಭೆಯ ಬಂಡಾಯ ಸದಸ್ಯ ಸುಖದೇವ್ ಸಿಂಗ್ ಧಿಂಡ್ಸಾ ಅವರು ಪದ್ಮವಿಭೂಷಣ ಪ್ರಶಸ್ತಿಯನ್ನು ವಾಪಸ್ ನೀಡಿದ್ದಾರೆ. 'ಭಾರತ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ' ಎಂದು ಹೇಳಿರುವ ಈ ಇಬ್ಬರೂ ಪ್ರಶಸ್ತಿ ಪುರಸ್ಕೃತರು ಇಂಥ ಗೌರವ ನಮಗೆ ಬೇಡ ಎಂದು ಹೇಳಿದ್ದಾರೆ.
ಈ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿರುವ ಪ್ರಕಾಶ್ ಸಿಂಗ್ ಬಾದಲ್ ಅವರು, ಶಾಂತಿಯುತವಾಗಿ ರೈತರು ಪ್ರತಿಭಟನೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡದೇ ಇರುವುದು ನನಗೆ ಆಘಾತವಾಗಿದೆ. ರೈತರನ್ನು ತಿರಸ್ಕಾರದಿಂದ ಕಾಣಲಾಗುತ್ತಿದೆ. ಆದ್ದರಿಂದ ನಾನು ಪ್ರಶಸ್ತಿಯನ್ನು ವಾಪಸ್ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಧಿಂಡ್ಸಾ ಅವರಿಗೆ ಕಳೆದ ವರ್ಷ ರಾಷ್ಟ್ರಪತಿಗಳು ಈ ಪ್ರಶಸ್ತಿ ನೀಡಿದ್ದರು. ಅವರು ಕೂಡ ಕೇಂದ್ರದ ವಿರುದ್ಧ ಸಿಡಿದೆದ್ದಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ತಂದಿರುವ ಕೃಷಿ ಮಾರುಕಟ್ಟೆ ಕುರಿತ ಕಾನೂನುಗಳು ಈಗಾಗಲೇ ರೈತರಿಗೆ ಮಾರಕವಾಗಿವೆ ಎಂದು ಅವರು ಹೇಳಿದ್ದಾರೆ.
ಇವರ ನಡೆಯನ್ನು ಕಾಂಗ್ರೆಸ್ ಶ್ಲಾಘಿಸಿದ್ದು, ಒಳ್ಳೆಯ ನಿರ್ಧಾರ ಎಂದಿದೆ.