

ಮುಂಬೈ: ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಎನ್‌ಸಿಬಿ ಬಲೆಗೆ ಬೀಳುತ್ತಿದ್ದಂತೆಯೇ ಬಾಲಿವುಡ್‌ನ ಹಲವರು ಆತನ ಪರವಾಗಿ ನಿಂತಿದ್ದಾರೆ. ಆರ್ಯನ್ ಮಾಡಿದ್ದು ದೊಡ್ಡ ತಪ್ಪಲ್ಲ, ಆತ ಅಮಾಯಕ ಎನ್ನುತ್ತಿದ್ದಾರೆ ಇವರೆಲ್ಲ.
ಈ ನಡುವೆಯೇ ನಟ ಸಲ್ಮಾನ್ ಖಾನ್ ಅವರ ಮಾಜಿ ಪ್ರೇಯಸಿ ಸೋಮಿ ಅಲಿ ಕೂಡ ಈಗ ಆರ್ಯನ್ ಪರವಾಗಿ ಬಂದಿದ್ದಾರೆ. ಆರ್ಯನ್ ಅಮಾಯಕ, ಗಾಂಜಾ ಸೇವನೆ ಮಾಡುವುದು ದೊಡ್ಡ ವಿಷಯವಲ್ಲ, ಆತನಿಗೆ ಜಾಮೀನು ನಿರಾಕರಿಸಿರುವ ನ್ಯಾಯಾಂಗ ವ್ಯವಸ್ಥೆಯೇ ಸರಿ ಇಲ್ಲ ಎಂದಿದ್ದಾರೆ.
ನಾನು 15ನೇ ವಯಸ್ಸಿಗೆ ಗಾಂಜಾ ಸೇದಿದ್ದೆ. ಶೂಟಿಂಗ್ ಸೆಟ್ನಲ್ಲೂ ಅದನ್ನು ತೆಗೆದುಕೊಂಡಿದ್ದೇನೆ. ಯುವಕರಾಗಿದ್ದಾಗ ಅನೇಕರು ಇದನ್ನು ಪ್ರಯತ್ನಿಸುತ್ತಾರೆ, ಅದೇನು ದೊಡ್ಡ ತಪ್ಪಲ್ಲ. ಅದರೆ ಕೆಲವರು ಮಾತ್ರ ಅದರಲ್ಲಿಯೇ ಮುಂದುವರೆಯುತ್ತಾರೆ. ಆದರೆ ನನಗೆ ಇದೆಲ್ಲಾ ಒಗ್ಗಲ್ಲ ಎಂದು ಬಿಟ್ಟುಬಿಟ್ಟೆ. ಆರ್ಯನ್ ಈಗ ಅದನ್ನು ಟ್ರೈ ಮಾಡಿರುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
ಅಂದಹಾಗೆ ಸಲ್ಮಾನ್ ಖಾನ್ ಪ್ರೇಯಸಿಯಾಗಿದ್ದ ಸೋಮಿ ಅವರು ಸದ್ಯ ಬಾಲಿವುಡ್‌ನಿಂದ ದೂರ ಉಳಿದಿದ್ದಾರೆ. ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಇವರು, ಎನ್‌ಜಿಒ ಸ್ಥಾಪಕಿಯಾಗಿಯಾಗಿದ್ದಾರೆ. ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿರುವ ನನಗೆ ಜನರ ಕಷ್ಟದ ಪರಿಸ್ಥಿತಿ ಎದುರಿಸುತ್ತಿರುವವರಿಗೆ ಸಹಾಯ ಮಾಡೋದು ಅಭ್ಯಾಸವಾಗಿದೆ.
ಆರ್ಯನ್ ಅಮಾಯಕನಾಗಿರುವ ಕಾರಣ ಅವನ ಅಪ್ಪ ಶಾರುಖ್ ಹಾಗೂ ಅಮ್ಮ ಗೌರಿ ಕಷ್ಟದ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ನನ್ನ ಧ್ವನಿ ಎತ್ತುತ್ತಿದ್ದೇನೆ. ಕಾನೂನು ಶ್ರೀಮಂತರು ಮತ್ತು ಬಡವರನ್ನು ಒಂದೇ ರೀತಿ ನೋಡಬೇಕು. ಮುಂಬೈನಲ್ಲಿ ಮನೆ ಇಲ್ಲದ ಅನೇಕರು ಡ್ರಗ್ ಸೇವನೆ ಮಾಡುತ್ತಾರೆ, ಅವರ್ಯಾರೂ ಶಾರುಖ್ ಹಾಗೂ ಗೌರಿ ಖಾನ್ ಮಕ್ಕಳಲ್ಲ, ಅದಕ್ಕಾಗಿ ಅವರನ್ನು ಬಂಧಿಸಿಲ್ಲ ಎಂದು ಕಿಡಿ ಕಾರಿದ್ದಾರೆ.