ಈತನ ಮಾತಿನ ಮೋಡಿಗೆ ಎಲ್ಲವನ್ನೂ ಅರ್ಪಿಸಿದ್ದ 35 ಸುಂದರಿಯರು! 36ಕ್ಕೆ ಸ್ಕೆಚ್‌ ಹಾಕಿ ಸಿಕ್ಕಬಿದ್ದ ಭೂಪ

gril friends
Published on

ಟೊಕಿಯೋ: ಈ ಚಿತ್ರದಲ್ಲಿ ಕಾಣುತ್ತಿರುವ ಈ ಆಸಾಮಿ ಹೆಸರು ಟಕಾಶಿ ಮಿಯಾಗವಾ. ಮುಗ್ಧನಂತೆ ಕಾಣುವ ಈ ಯುವಕನ ಕರಾಮತ್ತು ಇದೀಗ ಜಗಜ್ಜಾಹೀರವಾಗಿದ್ದು, ಬಹುತೇಕ ಯುವಕರು ಈತನ ಕಥೆ ಕೇಳಿ ಹೊಟ್ಟೆ ಉರಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಮಾತ್ರ ದಿಗಿಲುಗೊಂಡಿದ್ದಾರೆ.

39 ವರ್ಷದ ಟಕಾಶಿ ಸದ್ಯ ಜಪಾನ್‌ ಪೊಲೀಸರ ಅತಿಥಿ. ಇದಕ್ಕೆ ಕಾರಣ ಈತ ವಂಚಿಸಿರೋದು ಒಂದಿಬ್ಬರು ಯುವತಿಯರನ್ನಲ್ಲ, ಬದಲಿಗೆ 35 ಮಂದಿ ಯುವತಿಯರನ್ನು! 36ನೇ ಯುವತಿಗಾಗಿ ಹುಡುಕಾಡಲು ಹೋಗಿ ಸದ್ಯ ಸಿಕ್ಕಿಬಿದ್ದಿದ್ದು, ಉಳಿದ 35 ಮಂದಿ ಎಲ್ಲವನ್ನೂ ಈತನಿಗೆ ಅರ್ಪಿಸಿ ಕಣ್ಣೀರು ಸುರಿಸುತ್ತಿದ್ದಾರೆ.

35 ಮಂದಿ ಸುಂದರಿಯರನ್ನು ಈತ ತನ್ನ ಜಾಲಕ್ಕೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಮುಗ್ಧ ಮುಗ್ಧ ಮಾತುಗಳಿಂದ! ಸಿರಿವಂತನಂತೆ ಪೋಸ್‌ ಕೊಡುತ್ತ ಹುಡುಗಿಯರಿಗಾಗಿ (ಅದೂ ಶ್ರೀಮಂತ ಮನೆಯ ಯುವತಿಯರಿಗಾಗಿ) ಬಲೆ ಬೀಸುವ ಕೃತ್ಯದಲ್ಲಿ ತೊಡಗಿ ಹಲ ವರ್ಷಗಳೇ ಕಳೆದಿವೆಯಂತೆ. ದಿನಕ್ಕೆ ಒಬ್ಬರಂತೆ ಆದರೂ ತಿಂಗಳಿಗೆ 30 ದಿನಗಳು ಇರುವುದು ಸಮಸ್ಯೆ ಎಂದುಕೊಂಡಿರುವ ಈತ, ಒಬ್ಬರಿಗೊಬ್ಬರ ಅರಿವಿಗೆ ಬಾರದೇ ಉಳಿದ ಐದು ಮಂದಿಯನ್ನು ಮ್ಯಾನೇಜ್‌ ಮಾಡುವುದೇ ಕಷ್ಟವಾಗುತ್ತಿತ್ತು ಎಂದು ಪೊಲೀಸರಿಗೆ ಹೇಳಿಕೊಂಡಿದ್ದಾನೆ!

ಅಷ್ಟಕ್ಕೂ ಹುಡುಗಿಯರ ಚಟ ಹತ್ತಿಕೊಳ್ಳಲು ಒಂದು ವಿಚಿತ್ರ ಕಾರಣವೂ ಇದೆ. ಮೊದಲು ಈತನಿಗೊಬ್ಬಳು ಗರ್ಲ್‌ಫ್ರೆಂಡ್‌ ಇದ್ದಳು. ಇವನ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ ನೀಡಿದಳಂತೆ. ಪಾರ್ಟ್‌ಟೈಂ ಕೆಲಸ ಮಾಡಿಕೊಂಡಿದ್ದ ಈ ಯುವಕನಿಗೆ ಆಗಲೇ ಭಯಾನಕ ಯೋಚನೆ ಹೊಳೆದಿದೆ. ಒಬ್ಬಳು ಇಷ್ಟೊಂದು ದುಬಾರಿ ಗಿಫ್ಟ್‌ ನೀಡಿರುವಾಗ ಹೀಗೆ ಅನೇಕ ಮಂದಿ ಇದ್ದರೆ, ಅವರಿಗೆಲ್ಲಾ ಬೇರೆ ಬೇರೆ ದಿನ ಕೊಟ್ಟು ಅಂದು ತನ್ನ ಹುಟ್ಟುಹಬ್ಬ ಎಂದು ಹೇಳಿದರೆ ತಿಂಗಳುಪೂರ್ತಿ ಗಿಫ್ಟ್‌ ಪಡೆಯಬಹುದಲ್ಲ ಎಂದು ಯೋಚಿಸಿದ್ದೇ ತಡ... ಕಾರ್ಯಾಚರಣೆಗೆ ಇಳಿದಿದ್ದಾನೆ.

ಹೀಗೆ 35 ಮಂದಿ ಈತನ ಬಲೆಗೆ ಬಿದ್ದಿದ್ದಾರೆ. ಮಹಾ ಶ್ರೀಮಂತನಿರಬೇಕು ಎಂದುಕೊಂಡು ಮದುವೆಯಾಗುವ ಆಸೆಯಿಂದ ಈತ ಕರೆದ ಕಡೆಗೆಲ್ಲಾ ಹೋಗಿ ದೇಹವನ್ನೂ ಒಪ್ಪಿಸಿ ಬಂದಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ಈ ಭೂಪ, 36ನೇ ಯುವತಿಯ ಹುಡುಕಾಟದಲ್ಲಿ ತೊಡಗಿದ್ದ. ಇದು 35ನೇ ಯುವತಿಗೆ ತಿಳಿದಿದೆ. ನಂತರ ಆತನನ್ನು ಹಿಂಬಾಲಿಸಲು ಶುರು ಮಾಡಿದ್ದಾಳೆ. ದಿನಕ್ಕೊಂದರಂತೆ ಒಬ್ಬೊಬ್ಬರನ್ನು ಸಿಗುವುದು ಆಕೆಗೆ ತಿಳಿದಿದೆ. ತಡ ಮಾಡದ ಆಕೆ ಕೆಲವು ಯುವತಿಯನ್ನು ಸಂಪರ್ಕ ಮಾಡಿ ವಿಷಯ ತಿಳಿಸಿದ್ದಾಳೆ. ಎಲ್ಲರೂ ಸೇರಿ ‘ಟಕಾಶಿ ಮಿಯಾಗವಾ ಸಂತ್ರಸ್ತೆಯರ ಗುಂಪು’ ಶುರು ಮಾಡಿಕೊಂಡು ದೂರು ದಾಖಲು ಮಾಡಿದ್ದಾರೆ. ಸದ್ಯ ಈತ ಪೊಲೀಸರ ಅತಿಥಿ. ಆದರೆ ಇನ್ನೂ ಶ್ರೀಮಂತರಾಗುವ ಕನಸು ಕಂಡಿದ್ದ 35 ಯುವತಿಯರು ಮಾತ್ರ ಎಲ್ಲವನ್ನೂ ಕಳೆದುಕೊಂಡು ರೋಧಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net