ಕಂಪ್ಯೂಟರ್‌ನಲ್ಲಿ ಆನ್‌ ಇದ್ದ ಶಾಪಿಂಗ್‌ತಾಣದಲ್ಲಿ ಬಾಲಕ ಮಾಡಿದ ಎಡವಟ್ಟು! ಪಾರ್ಸೆಲ್‌ ನೋಡಿ ಬೆಚ್ಚಿಬಿದ್ದ ಅಮ್ಮ

cartoon
Published on

ನ್ಯೂಯಾರ್ಕ್‌: ಆನ್‌ಲೈನ್‌ ಶಾಪಿಂಗ್‌ ಮಾಡುತ್ತಿದ್ದ ಮಹಿಳೆಯೊಬ್ಬಳು ಅದನ್ನು ಆನ್‌ನಲ್ಲಿಯೇ ಇಟ್ಟು, ಬೇರೆ ಕೆಲಸಕ್ಕೆ ಹೋದಾಗ ಆಕೆಯ ನಾಲ್ಕು ವರ್ಷದ ಮಗ ಕಿತಾಪತಿ ಮಾಡಿ ಇಡೀ ಕುಟುಂಬವನ್ನು ಪೇಚಿಗೆ ಸಿಲುಕಿಸಿರುವ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ.

ನೋಹಾ ಎಂಬ ಬಾಲಕನಿಂದಾಗಿ ಈತನ ತಾಯಿ ಜೆನ್ನಿಫೇರ್‌ ಬ್ರೆಂಟ್‌ ಎಲ್ಲರ ಬಳಿ ಧನಸಹಾಯ ಬೇಡುವ ಸ್ಥಿತಿ ಬಂದೊದಿಗೆ.

ಅಷ್ಟಕ್ಕೂ ಆಗಿದ್ದೇನೆಂದರೆ ಜೆನ್ನಿಫೇರ್‌ ಅವರು ಅಮೇಜಾನ್‌ ಶಾಪಿಂಗ್‌ ತಾಣದಲ್ಲಿ ಶಾಪಿಂಗ್‌ ಮಾಡುತ್ತಿದ್ದರು. ಇದನ್ನು ಮಗ ಸರಿಯಾಗಿ ನೋಡಿಕೊಂಡಿದ್ದಾನೆ. ಈತ ಮಾನಸಿಕ ಸಮಸ್ಯೆಗೆ ಒಳಗಾಗಿರುವ ಬಾಲಕ. ಆದರೆ ಶಾಪಿಂಗ್‌ ಮಾತ್ರ ಚೆನ್ನಾಗಿ ಕಲಿತಿದ್ದ. ತಾಯಿ ಅತ್ತ ಹೋಗುತ್ತಿದ್ದಂತೆಯೇ ಮಗ ಬಹುತೇಕ ಮಕ್ಕಳ ಪ್ರೀತಿಯ ಕಾರ್ಟೂನ್‌ಗಳಲ್ಲಿ ಒಂದಾಗಿರುವ ಸ್ಪಾಂಜ್‌ಬಾಬ್‌ ಕಾರ್ಟೂನ್‌ ಆರ್ಡರ್‌ ಮಾಡಿಬಿಟ್ಟಿದ್ದಾನೆ. ಎಷ್ಟು ಬಾಕ್ಸ್‌ಗಳು ಬೇಕು ಎಂದು ಇರುವ ಕಾಲಮ್‌ನಲ್ಲಿ ಎಷ್ಟೋ ಒತ್ತಿದ್ದಾನೆ. 52 ಕೇಸ್‌ಗಳಿಗೆ ಆರ್ಡರ್‌ ಹೋಗಿದೆ.

ಇಷ್ಟು ಆರ್ಡರ್‌ ಇರುವ ಬೃಹತ್‌ ಬಾಕ್ಸ್‌ಗಳನ್ನು ಅಮೇಜಾನ್‌ ಡೆಲಿವರಿ ಬಾಯ್‌ ಮನೆಗೆ ತಂದಿದ್ದಾನೆ. ಅದನ್ನು ನೋಡಿ ಮಹಿಳೆ ಬೆಚ್ಚಿ ಬಿದ್ದಿದ್ದಾರೆ. ಇದು ತಮ್ಮದಲ್ಲ ಎಂದಿದ್ದಾರೆ. ಆದರೆ ಡೆಲಿವರಿ ಬಾಯ್‌ ದಾಖಲೆ ತೋರಿಸಿದ್ದಾನೆ. ನಂತರ ಮಗ ಖುಷಿಯಿಂದ ತಾನೇ ಆರ್ಡರ್‌ ಮಾಡಿದ್ದು ಎಂದಿದ್ದಾನೆ. ನಂತರ ಬಿಲ್‌ ನೋಡಿದಾಗ ಅದು $2,618.85 (ಅಂದರೆ ಸುಮಾರು 1.91 ಲಕ್ಷ ರೂಪಾಯಿ) ಆಗಿದೆ. ಆತನ ತಾಯಿ ಆಗಿರುವ ಅನಾಹುತವನ್ನು ಆತನ ಬಳಿ ಹೇಳಿದ್ದು, ವಾಪಸ್‌ ತೆಗೆದುಕೊಂಡು ಹೋಗುವಂತೆ ಕೋರಿದ್ದಾರೆ. ಆದರೆ ಅಮೇಜಾನ್‌ ಕಂಪೆನಿ ಇದನ್ನು ಒಪ್ಪಲಿಲ್ಲ. ಅನಿವಾರ್ಯವಾಗಿ ಅಷ್ಟೂ ಕೇಸ್‌ಗಳನ್ನು ಖರೀದಿ ಮಾಡಲೇಬೇಕಾಯಿತು.

ಅಷ್ಟು ಹಣ ಅವರ ಬಳಿ ಇಲ್ಲದ ಕಾರಣ, ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿರುವ ತನ್ನ ಸ್ನೇಹಿತೆ ಬಳಿ ಹೇಳಿಕೊಂಡಿದ್ದಾರೆ. ಅವರು ಆ ಸಮಯಕ್ಕೆ ಹಣ ಸಹಾಯ ಮಾಡಿದ್ದಾರೆ. ನಂತರ ಆ ಹಣವನ್ನು ಹೊಂದಿಸಲು ಖಾತೆಯೊಂದನ್ನು ತೆರೆದು ತಮ್ಮ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಕೋರಿದ್ದಾರೆ. ಅಚ್ಚರಿಯ ವಿಷಯವೆಂದರೆ ಅವರಿಗೆ ಅಗತ್ಯ ಇರುವುದಕ್ಕಿಂತಲೂ ಹೆಚ್ಚಿನ ಹಣ ಸಂಗ್ರಹವಾಗಿದೆ. ಆಟಿಸಮ್ ಸ್ಪೆಕ್ಟ್ರಮ್‌ ಎಂಬ ಮಾನಸಿಕ ಕಾಯಿಲೆಗೆ ಒಳಗಾಗಿರುವ ನನ್ನ ಬಾಲಕನಿಗೆ ನೆರವಾಗಿರುವುದಕ್ಕೆ ಧನ್ಯವಾದ ಹೆಚ್ಚುವರಿ ಹಣವನ್ನು ಆತನ ಚಿಕಿತ್ಸೆಗಾಗಿ ಹಾಗೂ ಶಿಕ್ಷಣಕ್ಕಾಗಿ ಉಪಯೋಗಿಸುವೆ ಎಂದು ಜೆನ್ನಿಫೇರ್‌ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net