

ಕೋಲ್ಕತ: ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಜಯ ಕಾಣುವುದು ಸಾಧ್ಯವಾಗಲಿಲ್ಲ. ಲೋಕಸಭೆ ಚುನಾವಣೆ ಸಮೀಪದಲ್ಲಿದೆ. ಇಂತಹ ಸನ್ನಿವೇಶದಲ್ಲಿ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪ್ರಜ್ಞೆ ಜಾಗೃತಗೊಳಿಸುವ ಕೆಲಸಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ತೀರ್ವನಿಸಿದೆ. ಇದಕ್ಕಾಗಿ 1,000 ಪೂರ್ಣಾವಧಿ ಕಾರ್ಯ ಕರ್ತರು ಕಣಕ್ಕೆ ಇಳಿಯಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ತಳಮಟ್ಟದಿಂದಲೇ ರಾಷ್ಟ್ರಪ್ರಜ್ಞೆ ಜಾಗೃತಿಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ. ಹೀಗಾಗಿ ರಾಜಕೀಯ ಬಲ ನೆಚ್ಚಿಕೊಳ್ಳದೇ ಪ್ರಚಾರಕರ ನೆರವಿನೊಂದಿಗೆ ತಳಮಟ್ಟದಲ್ಲಿ ಶಾಖೆಗಳನ್ನು ಸ್ಥಾಪಿಸುವ ಕೆಲಸ ನಡೆಯಲಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಬಂದಾಗ ಇದನ್ನು ಖಾತರಿಪಡಿಸಿದ್ದರು. ಬಂಗಾಳ ರಾಜಕೀಯ ವ್ಯವಸ್ಥೆಗೆ ಪೂರ್ಣಾವಧಿ ಕಾರ್ಯಕರ್ತರ ನಿಯೋಜನೆ ಹೊಸತೇನಲ್ಲ.
ಸಂಘದ 700 ಶಾಖೆಗಳು: ಪಶ್ಚಿಮ ಬಂಗಾಳದಲ್ಲಿ ಸದ್ಯ ಆರೆಸ್ಸೆಸ್ನ 700 ಶಾಖೆಗಳಿವೆ. ಇದನ್ನು 2024ರ ವೇಳೆಗೆ 1900 ಶಾಖೆಗಳಿಗೆ ವಿಸ್ತರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕಳೆದ ತಿಂಗಳು ಕರ್ನಾಟಕದ ಧಾರವಾಡದಲ್ಲಿ ನಡೆದ ಮಹತ್ವದ ಸಂಘಟನಾ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಬಿಪ್ಲಬ್ ರಾಯ್ ತಿಳಿಸಿದರು.
ಗ್ರಾಮಕ್ಕೆ ಒಬ್ಬ ಪ್ರಚಾರಕ: ಗ್ರಾಮೀಣ ಭಾಗದಲ್ಲಿ ಪಂಚಾಯಿತಿ ವ್ಯವಸ್ಥೆ ಇದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಪ್ರಚಾರಕನನ್ನು ಜನ ಸಂಘಟನೆ, ರಾಷ್ಟ್ರಪ್ರಜ್ಞೆ ಜಾಗೃತಿಗಾಗಿ ನಿಯೋಜಿಸಲಾಗುತ್ತಿದೆ. ಮುನ್ಸಿಪಾಲಿಟಿ ಮತ್ತು ಕಾರ್ಪೆರೇಶನ್ ಪ್ರದೇಶಗಳಲ್ಲಿ ಪ್ರತಿ ವಾರ್ಡ್ಗೆ ಒಬ್ಬ ಪ್ರಚಾರಕ ಇರಲಿದ್ದಾರೆ ಎಂದು ಆರೆಸ್ಸೆಸ್ ವಕ್ತಾರ ಬಿಪ್ಲಬ್ ರಾಯ್ ತಿಳಿಸಿದರು.