

ಬೆಂಗಳೂರು: ಲಾಕ್ಡೌನ್ನಿಂದಾಗಿ ಬೆಸ್ಕಾಂಗೆ 1,238 ಕೋಟಿ ರೂ. ಆದಾಯ ಖೋತಾ ಆಗಿದೆ. ಮಾ.23ರಿಂದ ಮಾಡಲಾದ ಲಾಕ್ಡೌನ್ನಿಂದಾಗಿ ಬಹುತೇಕ ಎಲ್ಲ ಸರ್ಕಾರಿ ಸಂಸ್ಥೆಗಳ ಆದಾಯಕ್ಕೆ ಹೊಡೆತ ಬಿದ್ದಿದೆ. ಲಾಕ್ಡೌನ್ ಅವಧಿಯಲ್ಲಿ ಬೆಸ್ಕಾಂ ನಿರಂತರ ಸೇವೆ ನೀಡಿದ್ದರೂ ವಿದ್ಯುತ್ ಬಿಲ್ನಲ್ಲಾದ ಗೊಂದಲದಿಂದಾಗಿ ಶೇ. 50 ಗ್ರಾಹಕರು ಬಿಲ್ ಪಾವತಿಸಿಲ್ಲ. ಅದಕ್ಕಿಂತ ಮುಖ್ಯವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಕಟ್ಟಡಗಳಿಂದ ಬರಬೇಕಿದ್ದ ಆದಾಯ ಕಡಿಮೆಯಾಗಿದ್ದು, ಸಂಸ್ಥೆಗೆ ನಷ್ಟವಾಗುವಂತಾಗಿದೆ.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ನಷ್ಟವುಂಟಾಗಿದೆ. 2019ರಲ್ಲಿ 3 ತಿಂಗಳಲ್ಲಿ 4,726.28 ಕೋಟಿ ರೂ. ಆದಾಯ ಬಂದಿತ್ತು. 2020ರ ಆ ಮೂರು ತಿಂಗಳಲ್ಲಿ 3487.66 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಇದನ್ನು ಗಮನಿಸಿದರೆ 1,238.62 ಕೋಟಿ ರೂ. ಆದಾಯ ಕಡಿಮೆಯಾಗಿದೆ.
ವಿದ್ಯುತ್ ಬಳಕೆ ಇಳಿಕೆ: ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಶಕ್ತಿಯುತ ವಿದ್ಯುತ್ ಬಳಕೆ ಕಡಿಮೆಯಾಗಿದೆ. ಈ ಎರಡು ತಿಂಗಳಲ್ಲಿ ಮಾಮೂಲಿಗಿಂತ ಶೇ. 38.81 ವಿದ್ಯುತ್ ಕಡಿಮೆ ಮಾರಾಟವಾಗಿದೆ. ಅದೇ ರೀತಿ ಕಡಿಮೆ ವೋಲ್ಟೇಜ್ ವಿದ್ಯುತ್ ಬಳಕೆಯಲ್ಲಿ ಶೇ. 46.51 ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಶೇ. 38.2 ಬೇಡಿಕೆ ಕಡಿಮೆಯಾಗಿದೆ.