ಕಬ್ಬಿನ ವಾಹನಕ್ಕೆ ಭದ್ರತೆ ಕೊಡಿ, ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ; ರೈತರಿಂದ ರಸ್ತೆ ತಡೆ, ಪ್ರತಿಭಟನೆ

5555
Published on

ಬಾಗಲಕೋಟೆ: ಪ್ರಸಕ್ತ ಹಂಗಾಮಿಗೆ ಉತ್ತಮ ಬೆಲೆ ನೀಡಬೇಕೆಂದು ಮುಧೋಳದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ರೈತ ಸಂಘಟನೆಗಳ ಪ್ರತಿಭಟನೆ ಇಂದು ಮಹತ್ವದ ತಿರುವು ಪಡೆದುಕೊಂಡಿದೆ.

ಕಬ್ಬಿಗೆ ಬೆಲೆ ಘೋಷಣೆ ಮಾಡದೇ ಕಾರ್ಖಾನೆ ಪ್ರಾರಂಭಿಸಬೇಡಿ ಎಂದು ಕೆಲವು ರೈತರು ಕೆಲವು ದಿನಗಳಿಂದ ಆಗ್ರಹಿಸುತ್ತಿದ್ದರೆ, ಇಂದು ಇನ್ನು ಕೆಲವು ಬೆಳೆಗಾರರು ಕಾರ್ಖಾನೆಗಳನ್ನು ಬೇಗ ಪ್ರಾರಂಭಿಸಲು ಮತ್ತು ತಮ್ಮ ಕಬ್ಬು ತುಂಬಿದ ವಾಹನಗಳಿಗೆ ಸೂಕ್ತ ಭದ್ರತೆ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನೂರಾರು ರೈತರು ಮುಧೋಳದ ರನ್ನ ಸರ್ಕಲ್ ಬಳಿ ಜಮಾಯಿಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟಿಸಿದರು.

ರೈತರು ತಮ್ಮ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ಸಾಧ್ಯವಾಗದ ಅಸಹಾಯಕತೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಎದುರು ತೋಡಿಕೊಂಡರು. ಮುಧೋಳ ಪ್ರವಾಸಿ ಬಂಗಲೆಯಲ್ಲಿ ಎಸ್ಪಿಗೆ ಘೇರಾವ್ ಕೂಡ ಹಾಕಿದರು. ರೈತರ ವಿಷಯದಲ್ಲಿ ಕಾಣದ ಕೈಗಳ ಕೈವಾಡ, ಸ್ಥಳೀಯ ಶಾಸಕರ ಅಸಹಕಾರ, ನಿರ್ಲಕ್ಷ್ಯ, ಒಣ ರಾಜಕೀಯ ನಡೆಯುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಬಂದ್ ಮಾಡಿವೆ. ಸಮಯಕ್ಕೆ ಸರಿಯಾಗಿ ಕಾರ್ಖಾನೆಗೆ ಕಬ್ಬು ರವಾನೆಯಾಗದಿದ್ದರೆ ಕಬ್ಬಿನ ತೂಕ ಕಡಿಮೆಯಾಗುತ್ತದೆ. ಇಳುವರಿ ಬರುವುದಿಲ್ಲ. ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ಲಗಾಣಿ ಕೊಟ್ಟು ರೈತ ತೊಂದರೆಗೆ ಸಿಲುಕುತ್ತಾನೆ. ಕುಳೆ ಕಬ್ಬು, ಹೊಸ ನಾಟಿ ಎಲ್ಲದಕ್ಕೂ ರೈತನೇ ಹಾನಿ ಅನುಭವಿಸುತ್ತಾನೆ. ಇದನ್ನು ರೈತ ಸಂಘಟನೆಗಳು ಹಾಗೂ ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ಸಮಸ್ಯೆ ಇಷ್ಟು ಜಟೀಲವಾದರೂ ಸ್ಥಳೀಯ ಶಾಸಕ, ಸಚಿವರು ಮಧ್ಯಸ್ಥಿಕೆ ವಹಿಸದೇ ಸುಮ್ಮನಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕಬ್ಬಿಗೆ ಉತ್ತಮ ಬೆಲೆ ಪಡೆಯಲು ಎಫ್.ಆರ್.ಪಿ. ಹಾಗೂ ಸಕ್ಕರೆಗೆ ಎಂ.ಎಸ್.ಪಿ ಹೆಚ್ಚಿಸಲು ಆಗ್ರಹಿಸಿ ಸರ್ಕಾರದ ವಿರುದ್ಧ ಹೋರಾಟ ಮಾಡೋಣ. ಸಕ್ಕರೆ ಕಾರ್ಖಾನೆ ಮುಚ್ಚಿಸಿ ಹೋರಾಟ ಮಾಡುವುದರಿಂದ ಯಾವ ಪುರುಷಾರ್ಥವೂ ಸಾಧನೆಯಾಗುವುದಿಲ್ಲ. ಈ ಹಿಂದೆ ಪ್ರಕಾಶ ಹುಕ್ಕೇರಿ ಸಕ್ಕರೆ ಸಚಿವರಾಗಿದ್ದಾಗ ಸರ್ಕಾರದಿಂದ ಪ್ರತಿ ಟನ್ ಗೆ ಹೆಚ್ಚುವರಿ ಹಣ ಕೊಡಿಸಿದ್ದರು. ಈಗಲೂ ಸರ್ಕಾರ ಪ್ರತಿ ಟನ್ ಕಬ್ಬಿನ ಮೇಲೆ ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕು. ಕೂಡಲೇ ಸಚಿವ ಕಾರಜೋಳ ಹಾಗೂ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ರೈತರ ಕಬ್ಬು ತುಂಬಿದ ವಾಹನಗಳಿಗೆ ಹಾಗೂ ಕಾರ್ಖಾನೆಗಳಿಗೆ ಸೂಕ್ತ ಭದ್ರತೆ ನೀಡಿ ಕಾರ್ಖಾನೆ ಪ್ರಾರಂಭಿಸಬೇಕು ಎಂದು ರೈತರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net