

ಚೆನ್ನೈ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚೆನ್ನೈನ ಕೆಲವು ಭಾಗ ಜಲಾವೃತವಾಗಿದೆ. ಇದರಿಂದಾಗಿ ಜನಜೀವನವೂ ಅಸ್ತವ್ಯಸ್ತವಾಗಿದ್ದು, ಸರ್ಕಾರ ಈಗಾಗಗಲೇ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿದೆ. ಇದೀಗ ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವು ಮುನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯ ವಿಪತ್ತು ಪಡೆಯ 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ರಾಜ್ಯದಲ್ಲಿ ವಿಪರೀತ ಮಳೆಯಾಗುತ್ತಿದ್ದ ಕಾರಣದಿಂದ ಹಲವು ಕಾರ್ಯಕ್ರಮಗಳಿಗೆ ತೊಂದರೆಯುಂಟಾಗಿದೆ. ಅದರಲ್ಲೂ ಪುಲಿಯಾಂತೋಪ್ನಲ್ಲಿರುವ ಆಂಜನೇಯ ದೇವಸ್ಥಾನವಿರುವ ಭಾಗದಲ್ಲಿ ರಾತ್ರಿಯಿಂದ ಸುರಿದ ಮಳೆಯಿಂದಾಗಿ ನಿಗದಿಯಾಗಿದ್ದ, ಹಲವು ವಿವಾಹ ಕಾರ್ಯಕ್ರಮಗಳಿಗೆ ವಿಳಂಬವುಂಟಾಗಿದೆ.
ಇದಾವುದಕ್ಕೂ ತಲೆಕೆಡಿಸಿಕೊಳ್ಳದ ನವ ಜೋಡಿಗಳು ಮಳೆಯ ನಡುವೆಯೇ ಮದುವೆಯಾಗಿದ್ದಾರೆ. ಸಂಪೂರ್ಣ ಜಲಾವೃತಗೊಂಡ ದೇವಸ್ಥಾನದಲ್ಲಿ ಒಂದೊಂದೇ ಜೋಡಿಗಳು ಸರತಿ ಸಾಲಿನಲ್ಲಿ ಬಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗುತ್ತಿದ್ದಂತೆ ಸಾಕಷ್ಟು ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ನವ ದಂಪತಿಗಳಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನೊಂದಿಷ್ಟು ಜನ, ಇಷ್ಟೊಂದು ಜೋರಾದ ಮಳೆಯಲ್ಲಿ ಯಾಕೆ ಮದುವೆಯಾಗುತ್ತಿದ್ದೀರಿ? ವಿವಾಹ ಕಾರ್ಯಕ್ರಮವನ್ನು ಮುಂದೂಡಬಹುದಿತ್ತಲ್ಲಾ ಎಂದು ಪ್ರಶ್ನಿಸಿದ್ದಾರೆ (ಏಜೆನ್ಸೀಸ್)