

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆಯನ್ನ ಅನಾವರಣ ಮಾಡಿ, ಜನರನ್ನು ಉದ್ಧೇಶಿಸಿ ಮಾತನಾಡಿದ್ದರು. ಈ ವೇಳೆ ಕರ್ನಾಟಕ ಡಬಲ್ ಇಂಜಿನ್ ಶಕ್ತಿಯಲ್ಲಿ ನಡೆಯುತ್ತಿದೆ. ಇಡೀ ದೇಶ ಕರೊನಾ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿದ್ದ ಕಾಲದಲ್ಲೂ ಕರ್ನಾಟಕಕ್ಕೆ 4 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ವಿದೇಶಿ ಬಂಡಾವಾಳ ಹೂಡಿಕೆಯಲ್ಲಿ ರಾಜ್ಯ ಮುಂದಿದೆ. ಬಯೋಟೆಕ್ನಾಲಜಿಯಲ್ಲಿ ಕರ್ನಾಟಕದ ಪಾಲು ಶೇ.20ರಷ್ಟಿದೆ ಎಂದು ಕೊಂಡಾಡಿದರು.
ಮೋದಿ ಡಬಲ್ ಎಂಜಿನ್ ಸರ್ಕಾರ ಎಂದು ಉಲ್ಲೇಖಿಸುತ್ತಿದ್ದಂತೆ, ಇತ್ತ ಕಾಂಗ್ರೆಸ್ ಟ್ರಬಲ್ ಎಂಜಿನ್ ಸರ್ಕಾರ ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿದೆ. ಟ್ವೀಟ್ ಮೂಲಕ ಪ್ರಧಾನಿಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ಬಿಜೆಪಿ ಸರ್ಕಾರದ ಮೇಲೆ ಕೇಳಿ ಬಂದಿರುವ ಆರೋಪಗಳನ್ನೆಲ್ಲಾ ಪಟ್ಟಿ ಮಾಡಿ ಟ್ವೀಟ್ ಮಾಡಿದೆ. ಇದೀಗ ಕಾಂಗ್ರೆಸ್, ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯವನ್ನು ಕಮರ್ಷಿಯಲ್ ಹಬ್ ಮಾಡುವ ಬದಲು ಕಮ್ಯುನಲ್ ಹಬ್ ಮಾಡಿದೆ. ಇದರ ಬಗ್ಗೆ ನೀವು ಮಾತನಾಡುವಿರಾ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ರಾಜ್ಯದಲ್ಲಿ ಕೈಗಾರಿಕೆಗಳು ಮುಚ್ಚುತ್ತಿವೆ. ಆದರೆ ಬಿಜೆಪಿಯ ಪ್ರೊಪೆಗಂಡಾದಂತೆ ಕಾರ್ಖಾನೆಗಳು ಎಗ್ಗಿಲ್ಲದೆ ಕೆಲಸ ಮಾಡುತ್ತಿವೆ. ಈವರಗೆ ರಾಜ್ಯದಲ್ಲಿ 800ಕ್ಕೂ ಹೆಚ್ಚು ಕೈಗಾರಿಕೆಗಳು ಸ್ಥಗಿತಗೊಂಡಿವೆ. ಹಲವು ಉದ್ಯಮಗಳು ಇಂದು ಬೇರೆಡೆ ಸ್ಥಳಾಂತರಗೊಂಡಿವೆ. ಇಂತಹ ಸಮಸ್ಯೆಗಳ ವೈಫಲ್ಯವನ್ನು ಮರೆಮಾಚುವ ಸಲುವಾಗಿ, ಹಿಜಾಬ್, ಹಲಾಲ್, ಆಜಾನ್ ಎಂದು ದಿನಕ್ಕೊಂದು ವಿವಾದ ಎಬ್ಬಿಸುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಆಡಳಿತವಿದ್ದಾಗ ಕರ್ನಾಟಕ ಅಭಿವೃದ್ಧಿಯಲ್ಲಿ ನಂ.1 ಆಗಿತ್ತು. ಆದರೆ ಬಿಜೆಪಿ ಸರ್ಕಾರದ ಆಡಳಿತ ಭ್ರಷ್ಟಾಚಾರದಲ್ಲಿ ನಂ.1 ಆಗಿದೆ. ಈ ಬಗ್ಗೆ ಹಲವರು ಪ್ರಧಾನಿಗೆ ಪತ್ರ ಬರೆದರೂ ಉತ್ತರ ಮಾತ್ರ ಬಂದಿಲ್ಲ. ಬೆಲೆ ಏರಿಕೆ ಜನರ ಚಿಂತೆಗೆ ಕಾರಣವಾಗಿದ್ದು, ರೈತರು ಬಸವಳಿದಿದ್ದಾರೆ. ಬಡವರು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಆದರೆ ಟ್ರಬಲ್ ಎಂಜಿನ್ ಸರ್ಕಾರ ಮಾತ್ರ ವಿದ್ಯುತ್ ದರ, ಆಸ್ತಿ ತೆರಿಗೆ, ನೀರಿನ ಬಿಲ್ಗಳನ್ನು ಏರಿಸಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.