

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ನಾಡಪ್ರಭು ಕೆಂಪೇಗೌಡರ’ ಬೃಹತ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರನ್ನೇ ಆಹ್ವಾನಿಸಿಲ್ಲ ಎಂದು ಜೆಡಿಎಸ್ ಆರೋಪಿಸಿ, ಟ್ವೀಟ್ ಮಾಡಿತ್ತು.
ಇದೀಗ ರಾಜ್ಯ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ನೀಡಲಾದ ಆಮಂತ್ರಣ ಪತ್ರಿಕೆಯ ಫೋಟೋವನ್ನು ಟ್ವೀಟ್ ಮಾಡಿದೆ. ಈ ಮೂಲಕ ಜೆಡಿಎಸ್ ಮಾಡಿರುವ ಆರೋಪವನ್ನು ತಳ್ಳಿ ಹಾಕಿದೆ.
ಪ್ರಧಾನಿಯಾಗಿದ್ದ ಕನ್ನಡಿಗ ದೇವೇಗೌಡರಿಗೇ ಮೊದಲ ಆಹ್ವಾನ ಪತ್ರ ನೀಡಲಾಗಿದೆ. ಅಲ್ಲದೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯ ಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡುವ ಮೂಲಕ ಜೆಡಿಎಸ್ನ ಆರೋಪವನ್ನು ವ್ಯಂಗ್ಯವಾಡಿದೆ.
ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ, ಕನ್ನಡ ನೆಲದಿಂದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗರಾದ ಎಚ್.ಡಿ.ದೇವೇಗೌಡ ಅವರನ್ನು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಸರಕಾರವು ಆಹ್ವಾನ ಮಾಡದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಜೆಡಿಎಸ್ ಟ್ವೀಟ್ ಮಾಡಿತ್ತು.
ಇದಕ್ಕೆ ಪ್ರತಿಯಾಗಿ, ಇದೀಗ ಬಿಜೆಪಿ ಕನ್ನಡದ ಅಸ್ಮಿತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಈ ಮಣ್ಣಿಗೆ ಸೇವೆ ಸಲ್ಲಿಸಿದ ಸಾಧಕರಾದಿಯಾಗಿ ನಮ್ಮ ರಾಜ್ಯದ ಕಟ್ಟ ಕಡೆಯಲ್ಲಿರುವವರನ್ನೂ ಮರೆಯದೇ, ಹಿಂಬಾಲಿಸಿ ಗುರುತಿಸಿದ್ದು ಬಿಜೆಪಿ. ಕುಟುಂಬವನ್ನೇ ಪಕ್ಷವನ್ನಾಗಿಸಿಕೊಂಡ ಜೆಡಿಎಸ್‌ಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬುದು ಯಾವತ್ತಿಗೂ ಬಿಡಿಸಲಾಗದ ಒಗಟು ಎಂದು ಟ್ವೀಟ್ ಮಾಡಿದೆ.