More

    ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಜೆಡಿಎಸ್​: ಸಮಸ್ತ ಕನ್ನಡಿಗರು-ನಾಡಪ್ರಭು ಕೆಂಪೇಗೌಡರಿಗೂ ಅವಮಾನಿಸಿದ ಬಿಜೆಪಿ…

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ನಾಡಪ್ರಭು ಕೆಂಪೇಗೌಡರ’ ಬೃಹತ್​ ಪ್ರತಿಮೆ ಇಂದು ಅನಾವರಣಗೊಂಡಿದೆ. ದೊಡ್ಡ ಮಟ್ಟದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಮಾಜಿ ಪ್ರಧಾನಿ ಎಚ್​.ಡಿ.ದೇವೆಗೌಡರನ್ನೇ ಆಹ್ವಾನಿಸಿಲ್ಲ ಎಂದು ಜೆಡಿಎಸ್‌ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪೇಗೌಡರ ಪ್ರಗತಿಯ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು. ಈ ವೇಳೆ ದೇವೇಗೌಡರ ಗೈರು ಎದ್ದು ಕಾಣುತ್ತಿತ್ತು. 2020ರ ಜುಲೈ 27ರಂದು ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲು ದೇವೇಗೌಡರನ್ನು ಆಹ್ವಾನಿಸಿದ್ದ ಇದೇ ಬಿಜೆಪಿ ಸರ್ಕಾರ, ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದೆ ದ್ವೇಶದ ರಾಜಕೀಯ ಮಾಡಿದೆ ಎಂದು ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗಿದೆ.

    ಅತ್ತ ಸರಣಿ ಟ್ವಿಟ್ ಮೂಲಕ ಅಸಮಧಾನ ಹೊರಹಾಕಿರುವ ಜೆಡಿಎಸ್, ನಾಡಪ್ರಭುಗಳ ಪ್ರತಿಮೆ ಸ್ಥಾಪನೆಯ ಕಾಮಗಾರಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನು ಆಹ್ವಾನಿಸಿದ್ದ ಬಿಜೆಪಿ ಸರ್ಕಾರ, ಪ್ರತಿಮೆ ಲೋಕಾರ್ಪಣೆ ಮಾಡಿಸುವ ಸಮಾರಂಭಕ್ಕೆ ಅವರನ್ನು ಆಹ್ವಾನಿಸಲಿಲ್ಲ ಏಕೆ? ಯಾವುದೋ ಸ್ಥಳೀಯ ಮಟ್ಟದ ಕಾರ್ಯಕ್ರಮ ಆಗಿದ್ದಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ, ನಾಡಪ್ರಭುಗಳ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿಗಳೇ ಬರುತ್ತಾರೆ ಎಂದರೆ, ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳನ್ನು ಅಧಿಕೃತವಾಗಿ ಕರೆಯಲೇಬೇಕಿತ್ತು. ಅವರ ಬಗ್ಗೆ ಅನಾದರ ತೋರಿದ್ದು ಕನ್ನಡಿಗರಿಗೆ ಅಪಾರ ನೋವುಂಟು ಮಾಡಿದೆ ಎಂದು ಆಕ್ರೋಶ ಹೊರ ಹಾಕಿದೆ.

    ನಾಡಪ್ರಭುಗಳು ಸಮಸ್ತ ಕನ್ನಡಿಗರ ಹೆಮ್ಮೆ. ನಮ್ಮೆಲ್ಲರ ಅರಾಧ್ಯದೈವ. ಇನ್ನು, ಬೆಂಗಳೂರು ನಗರ ನಮ್ಮೆಲ್ಲರದ್ದು. ಸಮಸ್ತ ಕನ್ನಡಿಗರ ಜೀವನಾಡಿ. ಈ ಸೂಕ್ಷ್ಮವನ್ನು ರಾಜ್ಯ ಬಿಜೆಪಿ ಸರ್ಕಾರ ಮರೆತು ಕನ್ನಡಿಗರನ್ನು ಅಪಮಾನಿಸಿದೆ. ಕೆಂಪೇಗೌಡರು @BJP4India ಆಸ್ತಿಯಲ್ಲ, ಕೆಲ ಸಚಿವರ ಜಹಗೀರಲ್ಲ, ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವ ವಿಷಯವೂ ಅಲ್ಲ. ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ, ಕನ್ನಡ ನೆಲದಿಂದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗರಾದ ಎಚ್​.ಡಿ.ದೇವೇಗೌಡರನ್ನು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರ ಆಹ್ವಾನಿಸದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಅಸಮಾಧಾನ ಹೊರಹಾಕಿದೆ.

    ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕಾಗಿ ಮಾಜಿ ಪ್ರಧಾನಿಗಳನ್ನು ಕಡೆಗಣಿಸಿದ್ದಾರೆ ಎನ್ನುವುದು ಎಲ್ಲರ ಭಾವನೆ. ಇದನ್ನು ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ನಡೆಸಿದ್ದು ಮಾಜಿ ಪ್ರಧಾನಿಗಳಿಗೆ ಮಾತ್ರವಲ್ಲ, ಸಮಸ್ತ ಕನ್ನಡಿಗರು ಹಾಗೂ ಸ್ವತಃ ನಾಡಪ್ರಭುಗಳಿಗೇ ಮಾಡಿದ ಅಪಮಾನ. ಇದು ಅಕ್ಷಮ್ಯದ ಪರಮಾವಧಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರು ದಾರಿ ತಪ್ಪಿಸಿದ್ದಾರೆ ಎನ್ನುವುದರಲ್ಲಿ ಸಂಶಯ ಇಲ್ಲ. ಮಾನ್ಯ ದೇವೇಗೌಡರ ಬಗ್ಗೆ ಅತೀವ ಗೌರವ ಇಟ್ಟುಕೊಂಡಿರುವ ಪ್ರಧಾನಿಗಳ ಬಗ್ಗೆಯೇ ಕನ್ನಡಿಗರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ನಾಯಕರು ವರ್ತಿಸಿದ್ದಾರೆ. ಸರ್ವ ಜನರನ್ನು ಸಮಾನವಾಗಿ ಕಂಡು ಆದರ್ಶ ಪ್ರಭುವಾಗಿದ್ದ ನಾಡಪ್ರಭು ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆಯುವ ಕೆಲಸವನ್ನು ಸ್ವತಃ ಪ್ರಧಾನಿ @narendramodi ಅವರೇ ಮಾಡಿರುವುದು ಸ್ಪಷ್ಟ. ಇದು ಅತ್ಯಂತ ದುರದೃಷ್ಟಕರ. ರಾಜ್ಯ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಪ್ರತಿಮೆ ಅನಾವರಣ ಮಾಡಲಾಗಿದೆ ಎನ್ನುವುದು ಸತ್ಯ ಎಂದು ಜೆಡಿಎಸ್​ ಟೀಕಿಸಿದೆ.

    ಇನ್ನು ಸಾಮಾಜಿಕ ಜಾಲತಾಣದಲ್ಲೂ ರಾಜ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಮಾವೇಶದ ವೇದಿಕೆಯಲ್ಲಿ ಆಸೀನರಾಗಲು ಬಿಜೆಪಿಯವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಒಕ್ಕಲಿಗರ ನಾಯಕ ದೇವೇಗೌಡರನ್ನೇ ಮರೆತು ಅವಮಾನಿಸಿದ್ದಾರೆ. ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುವಾಗ ದೇವೇಗೌಡರು ಬೇಕಿತ್ತು. ಉದ್ಘಾಟನೆಗೆ ದೇವೇಗೌಡರು ಬೇಡವೇ? ಕೆಂಪೇಗೌಡರ ಪ್ರತಿಮೆ ವಿಚಾರದಲ್ಲೂ ಬಿಜೆಪಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ನಿನ್ನೆ(ಗುರುವಾರ)ಯಿಂದ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್​ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ಕೆಂಪೇಗೌಡ ಪ್ರತಿಮೆ ಅನಾವರಣ: ಪ್ರಧಾನಿ ಮೋದಿ ಅವರ ಕಾರ್ಯ ಶ್ಲಾಘಿಸುತ್ತಲೇ ದೇವೇಗೌಡರನ್ನೂ ನೆನೆದ ಡಾ.ನಿರ್ಮಲಾನಂದನಾಥ ಸ್ವಾಮೀಜಿ

    ಟ್ರೋಲಿಗರನ್ನ ಕೆಣಕುತ್ತಲೇ ಹೊಸ ವಿಷಯ ಘೋಷಣೆ ಮಾಡಿದ ಡ್ರೋನ್​ ಪ್ರತಾಪ್​! ಅಷ್ಟೇ ಅಲ್ಲ, ಆಸಕ್ತರಿಗೆ ಸಂಪರ್ಕಿಸಲೂ ಕರೆ ನೀಡಿದ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts