

Newlywed couple : ಪ್ರೀತಿ ಮಾಡಿ, ಹಿರಿಯರ ಮನವೊಲಿಸಿ ಮದುವೆಯಾಗಿದ್ದ ನವದಂಪತಿ ಮದುವೆಯಾದ ಕೇವಲ ಒಂದೇ ತಿಂಗಳಲ್ಲಿ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಉಪ್ಪಡ ಕೊತ್ತಪಲ್ಲಿ ಮಂಡಲದ ಕೊಮರಗಿರಿಯಲ್ಲಿ ಸಂಭವಿಸಿದೆ.
ನವದಂಪತಿ, ಭಾನುವಾರ ಸಂಜೆ, ಆರ್ಕೆ ಬೀಚ್ಗೆ ಹೋಗುತ್ತಿದ್ದಾಗ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ. ಇಬ್ಬರ ಸಾವಿನಿಂದ ಪಾಲಕರು ಹಾಗೂ ಆಪ್ತ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಂದಹಾಗೆ, ಕೊಮರಗಿರಿಯ ಸಾಯಿ ನಾಗೇಂದ್ರ, ವಿಶಾಖಪಟ್ಟಣದಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಗಾಜುವಾಕದ ಶಾಲಿನಿ ಕೂಡ ಅದೇ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿ, ಅದು ಹೆಮ್ಮರವಾಗಿ ಬೆಳಯಿತು. ಸಾಯಿ ನಾಗೇಂದ್ರ ಮತ್ತು ಶಾಲಿನಿ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಅವರಿಬ್ಬರ ಪ್ರೀತಿಗೆ ಎರಡೂ ಕುಟುಂಬಗಳ ಹಿರಿಯರು ಆರಂಭದಲ್ಲಿ ಒಪ್ಪಿಗೆ ನೀಡಲಿಲ್ಲ. ಆದರೆ, ಇಬ್ಬರೂ ತಾಳ್ಮೆಯಿಂದ ಕಾಯುತ್ತಿದ್ದರು. ಕೊನೆಗೂ ಹಿರಿಯರ ಮನವೊಲಿಸಿದ ನಂತರ, ಶಾಲಿನಿ ಮತ್ತು ನಾಗೇಂದ್ರ ಕಳೆದ ತಿಂಗಳು 11 ರಂದು ಅದ್ಧೂರಿಯಾಗಿ ವಿವಾಹವಾದರು. ಒಂದು ವಾರದ ಹಿಂದಷ್ಟೇ ಅವರು ಗಾಜುವಾಕದಲ್ಲಿ ಹೊಸ ಮನೆಯಲ್ಲಿ ನೆಲೆಸಿದ್ದರು.
ನಿನ್ನೆ ಸಂಜೆ, ಆರ್ಕೆ ಬೀಚ್ಗೆ ಹೋಗುತ್ತಿದ್ದಾಗ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಸಾಯಿ ನಾಗೇಂದ್ರ ಸ್ಥಳದಲ್ಲೇ ಸಾವಿಗೀಡಾದರೆ, ಚಿಕಿತ್ಸೆ ಪಡೆಯುತ್ತಿದ್ದಾಗ ಶಾಲಿನಿ ಕೊನೆಯುಸಿರೆಳೆದಿದ್ದಾರೆ. ಶಾಲಿನಿ ಶನಿವಾರ ನಾಗೇಂದ್ರ ಅವರ ಹುಟ್ಟುಹಬ್ಬವನ್ನು ಆಚರಿಸಿದರು. ಇಬ್ಬರ ಸಾವಿನಿಂದ ಕುಟುಂಬ ಸದಸ್ಯರು ದುಃಖಿತರಾಗಿದ್ದಾರೆ. (ಏಜೆನ್ಸೀಸ್)