

Ahmedabad Plane Crash : ಅಹಮದಾಬಾದ್ ವಿಮಾನ ನಿಲ್ದಾಣ ಬಳಿ ಏರ್ ಇಂಡಿಯಾ ವಿಮಾನ ಪತನವಾದ ದಿನದಿಂದ ನಿರ್ದೇಶಕನೊಬ್ಬ ನಾಪತ್ತೆಯಾಗಿದ್ದು, ಆತನು ಕೂಡ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ನಿರ್ದೇಶಕ ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದು, ಆತನ ಕುಟುಂಬ ಡಿಎನ್ಎ ಸ್ಯಾಂಪಲ್ ಅನ್ನು ಸಲ್ಲಿಸಿದೆ. ಕೊನೆಯದಾಗಿ ಆತನ ಮೊಬೈಲ್ ಫೋನ್ ಲೊಕೇಶನ್ ವಿಮಾನ ಪತನವಾದ ಕೇವಲ 700 ಮೀಟರ್ ದೂರದಲ್ಲಿ ತೋರಿಸಿದೆ.
ಕಳೆದ ಗುರುವಾರ (ಜೂನ್ 12) ಮಧ್ಯಾಹ್ನ 1.39ಕ್ಕೆ ಟೇಕಾಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾದರು. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 29 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಮೃತಪಟ್ಟರು.
ನಾಪತ್ತೆಯಾಗಿರುವ ನಿರ್ದೇಶಕನನ್ನು ಮಹೇಶ್ ಕಲಾವಾಡಿಯಾ ಎಂದು ಗುರುತಿಸಲಾಗಿದೆ. ಆತನನ್ನು ಮಹೇಶ್ ಜಿರಾವಾಲಾ ಅಂತಾನೂ ಕರೆಯುತ್ತಾರೆ. ನರೋಡಾ ನಿವಾಸಿಯಾಗಿರುವ ಮಹಶ್, ಸಂಗೀತ ಆಲ್ಬಮ್‌ಗಳನ್ನು ನಿರ್ದೇಶಿಸುತ್ತಾರೆ. ಗುರುವಾರ ಮಧ್ಯಾಹ್ನ ಲಾ ಗಾರ್ಡನ್ ಪ್ರದೇಶದಲ್ಲಿ ಯಾರೋ ಒಬ್ಬರನ್ನು ಭೇಟಿಯಾಗಲು ಹೋಗಿದ್ದರು ಎಂದು ಅವರ ಪತ್ನಿ ಹೇತಲ್ ಹೇಳಿದರು.
ನನ್ನ ಪತಿ ಮಧ್ಯಾಹ್ನ 1.14ಕ್ಕೆ ನನಗೆ ಕರೆ ಮಾಡಿ ಅವರ ಮೀಟಿಂಗ್ ಮುಗಿದಿದೆ ಮತ್ತು ಮನೆಗೆ ಬರುತ್ತಿರುವುದಾಗಿ ಹೇಳಿದರು. ಆದರೆ, ಅವರು ವಾಪಸ್ ಬಾರದೇ ಇದ್ದಾಗ ನಾನು ಅವರ ಫೋನ್‌ಗೆ ಕರೆ ಮಾಡಿದೆ. ಆದರೆ, ಅದು ಸ್ವಿಚ್ ಆಫ್ ಆಗಿತ್ತು. ಇದಾದ ಬಳಿಕ ನಾನು ಪೊಲೀಸರಿಗೆ ಮಾಹಿತಿ ನೀಡಿದೆ. ಅವರ ಕೊನೆಯ ಮೊಬೈಲ್ ಫೋನ್ ಲೊಕೇಶನ್ ಪರಿಶೀಲಿಸಿದಾಗ ವಿಮಾನ ಪತನದ ಸ್ಥಳದಿಂದ 700 ಮೀಟರ್ ದೂರದಲ್ಲಿರುವುದನ್ನು ತೋರಿಸಿದೆ ಎಂದು ಹೇತಲ್ ತಿಳಿಸಿದರು.
ಗಂಡನ ಫೋನ್ ಮಧ್ಯಾಹ್ನ 1.40ರ ಸುಮಾರಿಗೆ (ವಿಮಾನ ಹಾರಾಟ ನಡೆಸಿದ ಒಂದು ನಿಮಿಷದ ನಂತರ) ಸ್ವಿಚ್ ಆಫ್ ಆಗಿತ್ತು. ಅವರ ಸ್ಕೂಟರ್ ಮತ್ತು ಮೊಬೈಲ್ ಫೋನ್ ಕಾಣೆಯಾಗಿದೆ. ಮನೆಗೆ ಬರಲು ಆ ಮಾರ್ಗವನ್ನು (ಕೊನೆಯ ಸ್ಥಳದ ಪ್ರಕಾರ) ಎಂದಿಗೂ ಬಳಸುತ್ತಿರಲಿಲ್ಲ. ಹೀಗಾಗಿ ಇದೆಲ್ಲವೂ ನೋಡಲು ವಿಚಿತ್ರ ಎನಿಸುತ್ತಿದೆ. ವಿಮಾನ ಅಪಘಾತದಲ್ಲಿ ಕೆಳಗಡೆ ಮೃತಪಟ್ಟವರಲ್ಲಿ ನನ್ನನ್ನು ಗಂಡನೂ ಇರಬಹುದು ಎಂದು ಪರಿಶೀಲಿಸಲು ನಾವು ಡಿಎನ್ಎ ಮಾದರಿಗಳನ್ನು ಸಲ್ಲಿಸಿದ್ದೇವೆ ಎಂದು ಹೇತಲ್ ಹೇಳಿದರು.
ಇನ್ನು ಈ ವಿಮಾನ ಅಪಘಾತದಲ್ಲಿ ಅನೇಕ ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಹೀಗಾಗಿ, ಗುರುತನ್ನು ಪತ್ತೆಹಚ್ಚಲು ಅಧಿಕಾರಿಗಳು ಡಿಎನ್ಎ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. 270 ಜನರು ಸಾವಿಗೀಡಾಗಿದ್ದು, ಮೂರು ದಿನಗಳ ನಂತರ, ಡಿಎನ್‌ಎ ಹೊಂದಾಣಿಕೆಯ ಮೂಲಕ 47 ಮೃತರ ಗುರುತನ್ನು ಮಾತ್ರ ಪತ್ತೆಹಚ್ಚಿರುವುದಾಗಿ ಆಸ್ಪತ್ರೆ ಅಧಿಕಾರಿಗಳು ಭಾನುವಾರ ದೃಢಪಡಿಸಿದ್ದಾರೆ. ಅಧಿಕಾರಿಗಳು 24 ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಿರುವುದಾಗಿ ಹೇಳಿದರು. (ಏಜೆನ್ಸೀಸ್)