ರಿಷಿ ಸುನಕ್ - ಅಕ್ಷತಾ ಮೂರ್ತಿ ಮೊದಲು ಭೇಟಿ ಆಗಿದ್ದೆಲ್ಲಿ? ಇಲ್ಲಿದೆ ಅವರ ಲವ್ ಸ್ಟೋರಿ ವಿವರ...

Rishi
Published on

ನವದೆಹಲಿ: ಭಾರತ ಮೂಲದ ರಿಷಿ ಸುನಕ್ ಈಗ ಬ್ರಿಟನ್ನಿನ ನಿಯೋಜಿತ ಪ್ರಧಾನಿಯಾಗಿದ್ದಾರೆ. ಅವರು ಕರ್ನಾಟಕದ ಅಳಿಯ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಇನ್‌ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಅವರನ್ನು ರಿಷಿ ಮದುವೆಯಾಗಿದ್ದಾರೆ. ಅಂದ ಹಾಗೆ ಅವರದು ಅರೇಂಜ್ಡ್ ಮ್ಯಾರೇಜ್ ಅಲ್ಲ, ಲವ್ ಮ್ಯಾರೇಜ್. ರಿಷಿ ಮತ್ತು ಅಕ್ಷತಾ ಮೊದಲು ಭೇಟಿಯಾಗಿದ್ದೆಲ್ಲಿ ಎಂಬುದು ಒಂದು ಕುತೂಹಲಕರ ಕಥೆ.

ಇನ್‌ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಸುಧಾ ಮೂರ್ತಿ ಸರಳತೆಗೆ ಇನ್ನೊಂದು ಹೆಸರು. ಅವರು ತಮ್ಮ ಮಕ್ಕಳನ್ನು ಕೂಡ ಸಾಮಾನ್ಯರಂತೆಯೇ ಬೆಳೆಸಿದ್ದಾರೆ. ಅಕ್ಷತಾ ಯಾವತ್ತೂ ಶಾಲೆಗೆ ಐಷಾರಾಮಿ ಕಾರಿನಲ್ಲಿ ಹೋಗುತ್ತಿರಲಿಲ್ಲ. ಇತರ ಖಾಸಗಿ ಶಾಲೆ ಮಕ್ಕಳಂತೆ ಆಟೋ ರಿಕ್ಷಾ ಅಥವಾ ಟೆಂಪೋದಲ್ಲೇ ಶಾಲೆಗೆ ಹೋಗುತ್ತಿದ್ದರು.

ಬೆಂಗಳೂರಿನಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಅಕ್ಷತಾ, ಉನ್ನತ ವ್ಯಾಸಂಗಕ್ಕಾಗಿ ಹೋಗಿದ್ದು ಅಮೆರಿಕಕ್ಕೆ. ಲಾಸ್ ಏಂಜಲೀಸ್‌ನಲ್ಲಿ ಫ್ಯಾಷನ್ ಡಿಸೈನಿಂಗ್ ಕಲಿತರು. ನಂತರ ಸ್ಟಾೃನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದರು. ಆಗಲೇ ರಿಷಿ ಸುನಕ್ ಅವರನ್ನು ಅಕ್ಷತಾ ಮೊದಲು ಭೇಟಿಯಾಗಿದ್ದು. ಓದಿನಲ್ಲಿ ಚುರುಕಾಗಿದ್ದ ರಿಷಿ, ಆಗಲೇ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು, ಎಂಬಿಎ ಓದಲು ಸ್ಟಾೃನ್‌ಫೋರ್ಡ್‌ಗೆ ಬಂದಿದ್ದರು. ಇವರಿಬ್ಬರ ಭೇಟಿ, ನಂತರ ಪ್ರೀತಿಗೆ ತಿರುಗಿತು. ಪಾಲಕರನ್ನು ಒಪ್ಪಿಸಿ 2009ರಲ್ಲಿ ಬೆಂಗಳೂರಿನಲ್ಲೇ ಮದುವೆಯಾದರು. ಆ ಮದುವೆ ಸಮಾರಂಭದಲ್ಲಿ ದೇಶದ ಹಲವು ಗಣ್ಯಾತಿಗಣ್ಯರು ಭಾಗವಹಿಸಿದ್ದರು.

ಆರಂಭದಲ್ಲಿ ಅಮೆರಿಕದಲ್ಲಿದ್ದ ಅಕ್ಷತಾ - ರಿಷಿ ದಂಪತಿ ನಂತರ ಬ್ರಿಟನ್‌ಗೆ ವಲಸೆ ಹೋದರು. ಅವರಿಗೆ ಈಗ ಕೃಷ್ಣ ಮತ್ತು ಅನುಷ್ಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇನ್‌ಫೋಸಿಸ್‌ನ ಕೋಟ್ಯಂತರ ಶೇರುಗಳು ಅಕ್ಷತಾ ಹೆಸರಿನಲ್ಲಿ ಇವೆ. ಹಾಗಾಗಿ ಆಕೆ ದೊಡ್ಡ ಶ್ರೀಮಂತೆ. ಎಷ್ಟರಮಟ್ಟಿಗೆ ಎಂದರೆ ಬ್ರಿಟನ್‌ನ ರಾಣಿಗಿಂತಲೂ ಹೆಚ್ಚು ಶ್ರೀಮಂತೆ. ಆದರೂ ಅಕ್ಷತಾ ಬ್ರಿಟನ್‌ನಲ್ಲಿ ಫ್ಯಾಷನ್ ಡಿಸೈನಿಂಗ್ ಬಿಸಿನೆಸ್‌ನಲ್ಲಿ ತೊಡಗಿದ್ದಾರೆ. ಭಾರತೀಯ ವಿನ್ಯಾಸಗಳೇ ಅವರ ಬಿಸಿನೆಸ್‌ನ ಹೈಲೈಟ್.

ಈಗಂತೂ ರಿಷಿ ಬ್ರಿಟನ್‌ನ ಪ್ರಧಾನಮಂತ್ರಿ ಹುದ್ದೆಗೆ ನಿಯೋಜಿತರಾಗಿದ್ದಾರೆ. ಇಷ್ಟಾದರೂ ಈ ಯುವಜೋಡಿ ಸರಳತೆಯನ್ನು ಬಿಟ್ಟುಕೊಡದೇ ಇರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net