

ನವದೆಹಲಿ: ನ್ಯಾಯಮೂರ್ತಿಗಳ ನೇಮಕಕ್ಕೆ ಜಾರಿಯಲ್ಲಿರುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡುವೆ ವಾಕ್ಸಮರ ನಡೆಯುತ್ತಿರುವ ಮಧ್ಯೆಯೇ, ಕಾನೂನು ಸಚಿವ ಕಿರಣ್ ರಿಜಿಜು ಕೊಲಿಜಿಯಂ ವಿರುದ್ಧ ಮತ್ತೊಮ್ಮೆಹರಿಹಾಯ್ದಿದ್ದಾರೆ.
ಹೊಸ ಪದ್ಧತಿ ಅನುಷ್ಠಾನಗೊಳ್ಳುವವರೆಗೆ ಉನ್ನತ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆ ಹಾಗೂ ನೇಮಕಾತಿ ಸಮಸ್ಯೆ ಹೀಗೆಯೇ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಕೇಂದ್ರ ಸರ್ಕಾರ ಸೀಮಿತ ಅಧಿಕಾರ ಹೊಂದಿದೆ. ಡಿ.9ಕ್ಕೆ ಅನ್ವಯವಾಗುವಂತೆ ಹೈಕೋರ್ಟ್ಗೆ 1,108 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದೆ. ಆದರೆ 777 ನ್ಯಾಯಮೂರ್ತಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ 331 ಹುದ್ದೆಗಳು ಖಾಲಿ ಉಳಿದಿವೆ. ಸುಪ್ರೀಂಕೋರ್ಟ್ನಲ್ಲಿ (ಡಿ.5ಕ್ಕೆ ಅನ್ವಯವಾಗುವಂತೆ) ಮಂಜೂರಾಗಿರುವ ನ್ಯಾಯಮೂರ್ತಿಗಳ ಸಂಖ್ಯೆ 34, ಆದರೆ ಕಾರ್ಯ ನಿರ್ವಹಿಸುತ್ತಿರುವವರು 27 ಮಂದಿ ಎಂದು ಅವರು ಹೇಳಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಸುಮಾರು 5 ಕೋಟಿಯಷ್ಟಿದೆ. ಇದು ಸಾರ್ವಜನಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಸಹಜವಾಗಿದೆ . ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ತಗ್ಗಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ ಶೀಘ್ರವಾಗಿ ಹೆಸರುಗಳನ್ನು ಶಿಫಾರಸು ಮಾಡುವಂತೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಮೌಖಿಕ ಮತ್ತು ಲಿಖಿತವಾಗಿ ಮನವಿ ಮಾಡಲಾಗಿದೆ ಎಂದು ರಿಜಿಜು ಹೇಳಿದರು.
ಬಿಜೆಪಿಯೇತರ ಆಡಳಿತವಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಜಾರ್ಖಂಡ್ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವ್ಯಾಟ್ ಕಡಿತಗೊಳಿಸದ ಕಾರಣ ಆ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಿವೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಲೋಕಸಭೆಗೆ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ತನ್ನನೀತಿಗಳು ಮತ್ತು ಕಾರ್ಯಕ್ರಮಗಳ ಜಾಹೀರಾತಿಗಾಗಿ ಕೇಂದ್ರ ಸರ್ಕಾರ ಒಟ್ಟು 3,723.38 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಮಾಹಿತಿ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ ತಿಳಿಸಿದ್ದಾರೆ.
2020ರಿಂದ ಈ ವರ್ಷದ ನವೆಂಬರ್ ನಡುವೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿರುದ್ಧ 60 ಲಕ್ಷ ಸಾರ್ವಜನಿಕ ಕುಂದುಕೊರತೆಗಳ ದೂರು ಬಂದಿದೆ ಎಂದು ಕೆಂದ್ರ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ತಿಳಿಸಿದ್ದಾರೆ.
1.47 ಲಕ್ಷ ಮಂದಿಗೆ ಉದ್ಯೋಗ
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಬ್ಯಾಂಕ್ಗಳಿಗೆ ರೋಜ್ಗಾರ್ ಮೇಳಗಳ ಮೂಲಕ 1.47 ಲಕ್ಷ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯಸಭೆಗೆ ಈ ಮಾಹಿತಿ ನೀಡಿರುವ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಮಿಷನ್ ಮೋಡ್ನಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಹೇಳಿದರು. 2020-21ರಲ್ಲಿ ನಿರುದ್ಯೋಗ ದರ ಅಥವಾ ಯುಆರ್ ( 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸಾಮಾನ್ಯ ಸ್ಥಿತಿಯ ಮೇಲೆ) ಶೇ.4.2ರಷ್ಟಿತ್ತು. ಇದೇ ಅವಧಿಯಲ್ಲಿ ವರ್ಕರ್ ಪಾಪ್ಯುಲೇಷನ್ ರೇಷನ್ (ಡಬ್ಲ್ಯುಪಿಆರ್) 52.6ರಷ್ಟಿತ್ತು ಎಂದು ಜಿತೇಂದ್ರ ಸಿಂಗ್ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.
ವಿಪಕ್ಷಗಳ ಗದ್ದಲ ಕಲಾಪಕ್ಕೆ ಅಡ್ಡಿ
ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ ಸೇರಿದಂತೆ ಹಲವು ವಿಷಯಗಳ ಕುರಿತು ನೀಡಿದ ನಿಲುವಳಿ ಸೂಚನೆಗೆ ಸಭಾಪತಿ ಅವಕಾಶ ನೀಡದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಇದರಿಂದ ರಾಜ್ಯಸಭೆಯ ಕಲಾಪಕ್ಕೆ ಮೊದಲ ಗಂಟೆಯ ಅವಧಿಯಲ್ಲಿ ಮೂರು ಬಾರಿ ಅಡ್ಡಿಯುಂಟಾಯಿತು. ತಮ್ಮ ನೋಟಿಸ್ಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿದ್ದರಿಂದ ಸದನದ ಕಲಾಪವು ಶೂನ್ಯ ವೇಳೆಯಲ್ಲಿ ತಲಾ 15 ನಿಮಿಷದಂತೆ ಎರಡು ಬಾರಿ ಹಾಗೂ ನಂತರ ಎರಡು ನಿಮಿಷಗಳ ಕಾಲ ಒಂದು ಬಾರಿ ಮುಂದೂಡಿಕೆಯಾಯಿತು. ನಿಯಮ 267ರ ಅಡಿ ನೀಡಿದ್ದ ನಿಲುವಳಿ ಸೂಚನೆಗೆ ಉಪಸಭಾಪತಿ ಹರಿವಂಶ್ ಅವರು ಅನುಮತಿ ಇಲ್ಲ ಎಂದು ಹೇಳುತ್ತಿದ್ದಂತೆ ವಿಪಕ್ಷ ಸದಸ್ಯರು ತಮ್ಮ ನೋಟಿಸ್ಗಳನ್ನು ಏಕೆ ಕೈಗೆತ್ತಿಕೊಳ್ಳಲಿಲ್ಲ ಎಂಬ ಬಗ್ಗೆ ಸ್ಪಷ್ಟನೆ ಕೇಳಿದರು. ಇದು ಗದ್ದಲಕ್ಕೆ ಕಾರಣವಾಯಿತು.
ಏಕಕಾಲ ಚುನಾವಣೆಯಿಂದ ಹಣ ಉಳಿತಾಯ
ಚುನಾವಣೆಗಳು ದೊಡ್ಡ ಬಜೆಟ್ ವ್ಯವಹಾರ ಆಗಿದ್ದು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಬೊಕ್ಕಸಕ್ಕೆ ಭಾರಿ ಹಣ ಉಳಿತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕಾನೂನು ಸಚಿವ ಕಿರಣ್ ರಿಜಿಜು, ಆಡಳಿತದಲ್ಲಿ ಸ್ಥಿರತೆಗಾಗಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂದು ಕಾನೂನು ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ ಎಂದು ಹೇಳಿದರು. ಏಕಕಾಲ ಚುನಾವಣೆಗಳಿಂದ ಮಾದರಿ ನೀತಿ ಸಂಹಿತೆಯ ದೀರ್ಘಾವಧಿಯ ಜಾರಿಯಿಂದಾಗುವ ವ್ಯತಿರಿಕ್ತ ಪರಿಣಾಮಗಳನ್ನು ತಡೆಯುತ್ತದೆ ಎಂದು ರಿಜಿಜು ಹೇಳಿದ್ದಾರೆ. ಲೋಕಸಭೆ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಿಗೆ 1951-52, 1957,1962 ಮತ್ತು 1967ರಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲಾಗಿತ್ತು. ಆದರೆ 1968 ಮತ್ತು 1969ರಲ್ಲಿ ಕೆಲವು ಶಾಸಕಾಂಗ ಅಸೆಂಬ್ಲಿಗಳ ಅವಧಿಪೂರ್ವ ವಿಸರ್ಜನೆಯಿಂದಾಗಿ ಚುನಾವಣೆ ಮತ್ತೆ ಬೇರೆ ಬೇರೆ ಸಮಯದಲ್ಲಿ ನಡೆಯಲು ಪ್ರಾರಂಭವಾಯಿತು.