ಹಿರಿಯರ ಪಾಲನೆಯ ಹೊಣೆ; ಪಾಲಕರಿಗೆ ಕಾಯ್ದೆಯ ರಕ್ಷಣೆ

Senior Citizen
Published on

ಈಚಿನ ವರ್ಷಗಳಲ್ಲಿ ಪಾಲಕರನ್ನು ಮತ್ತು ಮನೆಯ ಹಿರಿಯರನ್ನು ಮಕ್ಕಳು ಅನಾದರದಿಂದ ನೋಡುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ. ಸಮಾಜಶಾಸ್ತ್ರಜ್ಞರು ಈ ಬಗ್ಗೆ ಕಾಲಕಾಲಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಸರ್ಕಾರಗಳು ಈ ವಿಚಾರ ಆಯಾ ಕುಟುಂಬಕ್ಕೆ ಸಂಬಂಧಿಸಿದ್ದು ಎಂದು ಉದಾಸೀನ ಮಾಡದೆ, ಕೆಲ ಉಪಕ್ರಮಗಳನ್ನು ತೆಗೆದುಕೊಂಡಿರುವುದು ಸ್ಪಲ್ಪ ಸಮಾಧಾನಕರ.

ವೃದ್ಧ ಪಾಲಕರು ಹಾಗೂ ಹಿರಿಯ ನಾಗರಿಕರಿಗೆ ಸುರಕ್ಷತೆ ಖಾತ್ರಿಪಡಿಸುವ ವಿಷಯ ಬುಧವಾರ ವಿಧಾನ ಪರಿಷತ್ ಕಲಾಪದಲ್ಲಿ ಪ್ರಸ್ತಾಪವಾಗಿ ಚರ್ಚೆಯಾಗಿದ್ದು ಗಮನಾರ್ಹ. ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಅವರು, ‘ಕೆಲ ಮಕ್ಕಳು ವೃದ್ಧ ಪಾಲಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಪಾಲಕರನ್ನು ಅನಾಥಾಶ್ರಮಕ್ಕೆ ಸೇರಿಸುವ ಪ್ರಕರಣಗಳು ಹೆಚ್ಚುತ್ತಿವೆ. ವೃದ್ಧ ಪಾಲಕರು ಹಾಗೂ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ, ಕಿರುಕುಳ ತಡೆಯಲು ಕಠಿಣ ಕಾನೂನು ತರಬೇಕು’ ಎಂದು ಅವರು ಒತ್ತಾಯಿಸಿದರು.

ಈ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಈಗಾಗಲೇ ಇರುವ ಕಾನೂನಿನ ಬಗ್ಗೆ ಉಲ್ಲೇಖಿಸಿದರು.

ಕೇಂದ್ರ ಸರ್ಕಾರವು 2007ರಲ್ಲೇ ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರನ್ವಯ, ಮಕ್ಕಳು/ಸಂಬಂಧಿಕರು ಹಿರಿಯ ನಾಗರಿಕರ ಪೋಷಣೆ ಮಾಡಬೇಕು; ಔಷಧ-ಮಾತ್ರೆ ಸೇರಿ ತಿಂಗಳ ಖರ್ಚಿಗೆ ಹಣ ಕೊಡಬೇಕು; ಸರಿಯಾಗಿ ಆರೈಕೆ ಮಾಡದವರ ವಿರುದ್ಧ ಪಾಲಕರು ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಬಹುದು. ‘ವಯೋವೃದ್ಧ ಪಾಲಕರು ಮತ್ತು ಹಿರಿಯ ನಾಗರಿಕರ ಆರೈಕೆ ವಿಚಾರದಲ್ಲಿ ರಾಜ್ಯ ಸರ್ಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಉಪವಿಭಾಗಾಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ’ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ರಾಜ್ಯದ ವಿವಿಧೆಡೆಯ ಉಪವಿಭಾಗಾಧಿಕಾರಿಗಳ ಎದುರು ಇಂಥ ನೂರಾರು ಪ್ರಕರಣಗಳಿದ್ದು, ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಪಾಲಕರ ಆಸ್ತಿ ಪಡೆದುಕೊಂಡು, ನಂತರ ಅವರನ್ನು ಸರಿಯಾಗಿ ಆರೈಕೆ ಮಾಡದೆ ನಿಷ್ಕಾಳಜಿ ತೋರಿದರೆ, ಕಾಯ್ದೆಯ ಸೆಕ್ಷನ್ 23ರ ಅನ್ವಯ ವಯೋವೃದ್ಧ ಪಾಲಕರು ಹಾಗೂ ಹಿರಿಯ ನಾಗರಿಕರು ತಮ್ಮ ಮಕ್ಕಳು ಅಥವಾ ಸಂಬಂಧಿಕರ ಹೆಸರಿಗೆ ಬರೆದಿರುವ ಆಸ್ತಿಯ ಉಯಿಲನ್ನು ರದ್ದುಪಡಿಸಬಹುದು. ಜತೆಗೆ, ಆಸ್ತಿಯ ಹಕ್ಕನ್ನು ಪಾಲಕರ ಹೆಸರಿಗೆ ಮರುಸ್ಥಾಪಿಸಲು ಸಹ ಕಾಯ್ದೆಯಲ್ಲಿ ಅವಕಾಶವಿದೆ. ಆದರೆ ಜನರಲ್ಲಿ ಈ ಕಾಯ್ದೆಯ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಪಾಲಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದು, ಚಿಕಿತ್ಸೆ ಮುಗಿದ ನಂತರವೂ ಅವರನ್ನು ಮನೆಗೆ ಕರೆದುಕೊಂಡು ಹೋಗದ ಪ್ರಕರಣಗಳು ಈಚೆಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ವರದಿಯಾಗಿತ್ತು.ಇವನ್ನೆಲ್ಲ ನೋಡುತ್ತಿದ್ದಾಗ, ಪಾಲಕರು ಅಥವಾ ಹಿರಿಯರ ಬಗ್ಗೆ ಮಕ್ಕಳು ಸಂವೇದನಾರಹಿತರಾಗುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಬದಲಾದ ಜೀವನಶೈಲಿ, ಮನೋಭಾವ ಇದಕ್ಕೆ ಕಾರಣವಾಗಿರಬಹುದಾದರೂ, ಇದು ಆರೋಗ್ಯಕರ ಬೆಳವಣಿಗೆಯಲ್ಲ. ಎಲ್ಲರೂ ಹೀಗಲ್ಲ ಎಂಬುದು ಹೌದಾದರೂ, ಈ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ. ಹಾಗೇ, ತಮಗೂ ಮುಂದೊಂದು ದಿನ ವಯಸ್ಸಾಗುತ್ತದೆ ಎಂಬ ವಾಸ್ತವ ಅರಿತು ವರ್ತನೆ ರೂಢಿಸಿಕೊಳ್ಳುವುದು ಅಪೇಕ್ಷಣೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net