ಸುರಂಗ ಕುಸಿತ: ಜಟಿಲವಾದ ರಕ್ಷಣೆ.. ಸುರಂಗದಲ್ಲಿ ಬವಣೆ..

Rescue
Published on
ಉತ್ತರಾಖಂಡದ ಉತ್ತರಕಾಶಿ ಬಳಿ ನಿರ್ವಿುಸುತ್ತಿದ್ದ ಸುರಂಗ ಮಾರ್ಗದಲ್ಲಿ 41 ಕಾರ್ವಿುಕರು ಸಿಲುಕಿ ಹತ್ತು ದಿನಗಳೇ ಕಳೆದಿವೆ. ಕೊಳವೆ ಮೂಲಕ ಅವರಿಗೆ ಆಮ್ಲಜನಕ, ನೀರು, ಅಲ್ಪಾಹಾರ ಮುಂತಾದ ಅವಶ್ಯಕ ವಸ್ತುಗಳನ್ನು ಪೂರೈಸಲಾಗುತ್ತಿದೆಯಾದರೂ, ಒಳಗೆ ಅವರ ಪರಿಸ್ಥಿತಿ ಏನಾಗಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನವನ್ನು ಬಳಸಿದರೂ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗುತ್ತಿಲ್ಲ. ಹೀಗೇಕಾಗುತ್ತಿದೆ? ಅಲ್ಲಿ ಏನು ನಡೆಯುತ್ತಿದೆ? ಇಲ್ಲಿದೆ ವಿವರ.

ಚಾರ್​ಧಾಮ್ ಮಹಾಮಾರ್ಗ ಯೋಜನೆಯ ಅಂಗವಾಗಿ, ಸಿಲ್ಕ್ಯಾರಾ ತಿರುವು- ಬಾರ್ಕೇಟ್ ನಡುವೆ ನಾಲ್ಕೂವರೆ ಕಿಮೀ ಉದ್ದದ ಸುರಂಗ ನಿರ್ವಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ 2018ರ ಫೆಬ್ರವರಿಯಲ್ಲಿ ಅನುಮೋದನೆ ನೀಡಿತ್ತು. ಈ ಸುರಂಗದ ಒಂದು ಭಾಗ ನಿರ್ಮಾಣ ಹಂತದಲ್ಲಿರುವಾಗಲೇ ನ. 12ರಂದು ಕುಸಿದಿದ್ದು, 41 ಕಾರ್ವಿುಕರು ಸಿಲುಕಿಕೊಂಡಿದ್ದಾರೆ. ಭಾನುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಭೇಟಿ ನೀಡಿದ್ದರು.

ಈ ನಡುವೆ, ತಜ್ಞರ ಸಲಹೆಯ ಮೇರೆಗೆ ರಕ್ಷಣಾ ಕಾರ್ಯಾಚರಣೆಯ ತಂತ್ರಗಾರಿಕೆಯನ್ನು ಬದಲಿಸಲಾಗಿದೆ. ಐದು ಹೊಸ ತಂಡಗಳು ಸ್ಥಳಕ್ಕೆ ಆಗಮಿಸಿವೆ. ಇದುವರೆಗೆ ಒಂದು ಸ್ಥಳದಿಂದ ಮಾತ್ರ ಕೊರೆಯಲಾಗುತ್ತಿದ್ದ ಸುರಂಗವನ್ನು ಇನ್ನು 5 ಸ್ಥಳಗಳಿಂದ ಕೊರೆಯಲು ನಿರ್ಧರಿಸಲಾಗಿದೆ. ಹೀಗಾಗಿ, ರಕ್ಷಣಾ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.

ಸುರಂಗ ಕೊರೆಯುವ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿ, ರೈಲ್ ವಿಕಾಸ ನಿಗಮ್ ಲಿಮಿಟೆಡ್, ತೆಹ್ರಿ ಹೈಡ್ರೋಇಲೆಕ್ಟ್ರಿಕ್ ಅಭಿವೃದ್ಧಿ ಮಂಡಳಿ, ಸಟ್ಲೇಜ್ ಜಲ್ ವಿದ್ಯುತ್ ನಿಗಮ ಮತ್ತು ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೆರೇಶನ್ ವಹಿಸಿಕೊಂಡಿವೆ. ಈ ಐದೂ ಸಂಸ್ಥೆಗಳು 5 ಬೇರೆ ಬೇರೆ ಸ್ಥಳಗಳಿಂದ ಕಾರ್ವಿುಕರ ರಕ್ಷಣೆ ಮತ್ತು ಅವರಿಗೆ ಆಹಾರ, ನೀರು ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆ ಸಲುವಾಗಿ ಕಾರ್ಯಾಚರಣೆ ನಡೆಸುತ್ತಿವೆ.

ತಜ್ಞರ ಆಗಮನ...: ರಕ್ಷಣಾ ಕಾರ್ಯಾಚರಣೆಗೆ ಸೋಮವಾರ ಅಂತಾರಾಷ್ಟ್ರೀಯ ಸುರಂಗ ತಜ್ಞರನ್ನು ಕರೆತರಲಾಗಿದೆ. ಇಂಟರ್​ನ್ಯಾಶನಲ್ ಟನೆಲಿಂಗ್ ಅಂಡರ್​ಗ್ರೌಂಡ್ ಸ್ಪೇಸ್​ನ ಪ್ರೊ.ಅರ್ನಾಲ್ಡ್ ಡಿಕ್ಸ್ ತಮ್ಮ ತಂಡದೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ‘ಸುರಂಗದಲ್ಲಿ ಸಿಲುಕಿರುವವರನ್ನು ನಾವು ಹೊರಗೆ ತರಲಿದ್ದೇವೆ. ಇದೇ ನಮ್ಮ ಮೊದಲ ಆದ್ಯತೆ. ಇಲ್ಲಿನ ತಂಡ ಮತ್ತು ಯೋಜನೆಗಳು ಅದ್ಭುತವಾಗಿವೆ’ ಎಂದು ಡಿಕ್ಸ್ ಹೇಳಿದ್ದಾರೆ.

ಸುರಂಗದೊಳಗೆ ಸಿಲುಕಿರುವ ಕಾರ್ವಿುಕರಿಗೆ ವಿಟಮಿನ್ ಮಾತ್ರೆಗಳು ಹಾಗೂ ಖಿನ್ನತೆ ನಿಗ್ರಹಕ್ಕೆ ಮಾತ್ರೆಗಳನ್ನು ನೀಡಲಾಗಿದೆ. ಕಾರ್ವಿುಕರನ್ನು ಸುರಕ್ಷಿತವಾಗಿ ಮೇಲೆ ತರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯು ತಜ್ಞರ ಸಲಹೆ, ಸೂಚನೆಯಂತೆ ನಡೆಯುತ್ತಿದೆ. | ನಿತಿನ್ ಗಡ್ಕರಿ, ಕೇಂದ್ರ ಸಚಿವ

ಸುರಂಗ ನಿರ್ಮಾಣ

1. ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿಯು ಈಗಾಗಲೇ ಸಿಲ್ಕ್ಯಾರಾ ಭಾಗದಿಂದ ಸುರಂಗ ಕೊರೆಯುವ ಕೆಲಸ ಆರಂಭಿಸಿದ್ದು, ಆಹಾರ ಪೂರೈಕೆಗೆ ಬಳಸುತ್ತಿರುವ ಒಂದು ಪೈಪ್ ಜೊತೆಗೆ ಮತ್ತೊಂದು 6 ಇಂಚಿನ ಪೈಪ್​ಲೈನ್ ಅಳವಡಿಸುತ್ತಿದೆ. 60 ಮೀಟರ್​ನಲ್ಲಿ ಈಗಾಗಲೇ 39 ಮೀ.ಗಳನ್ನು ಪೂರ್ಣಗೊಳಿಸಿದೆ. ಇದು ಒಮ್ಮೆ ಪೂರ್ಣಗೊಂಡ ಬಳಿಕ ಹೆಚ್ಚುವರಿ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತದೆ.

2. ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಸಂಸ್ಥೆ ಸುರಂಗದ ಮೇಲ್ಭಾಗದಿಂದ ರಂಧ್ರ ಕೊರೆಯಲು ಆರಂಭಿಸಿದ್ದು, ಇಲ್ಲಿಂದಲೂ ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗುತ್ತದೆ.

3. ತೆಹ್ರಿ ಹೈಡ್ರೋ ಎಲೆಕ್ಟ್ರಿಕ್ ಅಭಿವೃದ್ಧಿ ಮಂಡಳಿ ಸುರಂಗದ ಇನ್ನೊಂದು ತುದಿಯಾದ ಬಾರ್​ಕೋಟ್ ಕಡೆಯಿಂದ ಸುರಂಗ ಕೊರೆಯುವ ಕೆಲಸ ಆರಂಭಿಸಲಿದ್ದು, ಇದಕ್ಕಾಗಿ ಅಗತ್ಯವಿರುವ ಎಲ್ಲ ಯಂತ್ರಗಳನ್ನು ಸಾಗಿಸಲಾಗಿದೆ.

4. ಸಟ್ಲೇಜ್ ಜಲ್ ವಿದ್ಯುತ್ ನಿಗಮ ಸುರಂಗದ ಮೇಲ್ಭಾಗದಿಂದ ಸುರಂಗ ಕೊರೆಯುವ ಕೆಲಸ ಮಾಡಲಿದ್ದು, ಇದಕ್ಕಾಗಿ 75 ಟನ್ ತೂಕದ ಸಾಮಗ್ರಿಗಳನ್ನು ಈಗಾಗಲೇ ಏರ್​ಲಿಫ್ಟ್ ಮಾಡಲಾಗಿದೆ.

5. ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೆರೇಶನ್ ಸಹ ಮೇಲ್ಭಾಗದಿಂದ ಸುರಂಗ ಕೊರೆಯಲಿದ್ದು, ಇದು ಬಾರ್​ಕೋಟ್ ಕಡೆಯಿಂದ ತನ್ನ ಕೆಲಸ ಆರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net