ಹರಿ ಸ್ಮರಣೆಯೇ ಪರಿಹಾರ

ವಿಜಯವಾಣಿ
Published on

ಯಾರು ನಿತ್ಯದಲ್ಲಿ ಸ್ವವರ್ಣಾಶ್ರಮೋಚಿತ ಕರ್ಮಗಳನ್ನು ಭಕ್ತಿ ಶ್ರದ್ಧೆಯಿಂದ ಮಾಡುತ್ತಾರೊ, ಭಗವಂತನ ಕಥೆಗಳನ್ನು ಭಕ್ತಿಯಿಂದ ಕೇಳುತ್ತಾರೋ ಅಂತಹವರಿಗೆ ಉತ್ಪಾತ ಮೊದಲಾದ ಅನಿಷ್ಟಗಳು ಅನರ್ಥವನ್ನುಂಟು ಮಾಡುವುದಿಲ್ಲ.

ನ ಯತ್ರ ಶ್ರವಣಾದೀನಿ ರಕ್ಷೋಘ್ನಾನಿ ಸ್ವಕರ್ಮಸು

ಕುರ್ವಂತಿ ಸಾತ್ವತಾಂ ಭರ್ತರ್ಯಾತುಧಾನ್ಯಶ್ಚ ತತ್ರ ಹಿ (ಭಾಗ.10.1.6.3)

ಯಾರು ಸತ್ಕರ್ಮಗಳನ್ನು ಮಾಡುವುದಿಲ್ಲವೋ ಅಂತಹವರ ಮನೆಯಲ್ಲಿ ರಾಕ್ಷಸರು, ಪಿಶಾಚಿಗಳು, ದುಷ್ಟಶಕ್ತಿಗಳು ನಾನಾ ರೋಗ ರೂಪದಲ್ಲಿ, ನಾನಾವಿಧವಾದ ವಿಘ್ನಗಳ ರೂಪದಲ್ಲಿ ನಾನಾವಿಧವಾದ ಮಾನಸಿಕ ವ್ಯಥೆಗಳ ರೂಪದಲ್ಲಿ ವಾಸಮಾಡುತ್ತಾರೆ. ಹಿಂಸೆಯನ್ನು, ಪೀಡೆಯನ್ನುಂಟು ಮಾಡುತ್ತಾರೆ. ಬಹಳ ಮಹತ್ವದ ಮಾತು. ಒಂದು ಮನೆಯಲ್ಲಿ ಮದುವೆ ನಡೆಯುವುದಿದೆ. ಭಗವಂತನ ಕಥೆಯ ಶ್ರವಣ ಮಾಡಿ, ರುಕ್ಮಿಣೀಶನ ಧ್ಯಾನ ಮಾಡಿ, ಪಾರ್ವತಿ ಕಲ್ಯಾಣ ಮಾಡಿ, ಭಗವಂತನ ವಿವಾಹಾದಿಕಥೆಗಳನ್ನು ಕೇಳಿ, ವಿಘ್ನಗಳು ಪರಿಹಾರ ಆಗುವುದರಲ್ಲಿ ಸಂದೇಹವೇ ಇಲ್ಲ.

ರಾಕ್ಷಸರ, ಪಿಶಾಚಿಗಳ ದುಷ್ಟಶಕ್ತಿಗಳನ್ನು ನಾಶ ಮಾಡುವ ಶ್ರವಣ ಮನನಗಳು ಇಲ್ಲ, ಧ್ಯಾನ ಇಲ್ಲ, ಭಗವಂತನ ಚಿಂತನೆ ಇಲ್ಲ ಎಂದರೆ ವಿಘ್ನಗಳು ಬರುವುದು ನಿಶ್ಚಿತ. ಮಗ ಹುಟ್ಟಿದ್ದಾನೆ. ಪುತ್ರೋತ್ಸವ ಆಗಿದೆ. ಇದೇ ಒಂದು ದೊಡ್ಡ ಶುಭಕಾರ್ಯ. ಈ ಪುತ್ರೋತ್ಸವದಲ್ಲಿ ನಾನು ಮಾಡುವ ನಾಮಕರಣಾದಿ ಎಲ್ಲ ಶುಭಕರ್ಮಗಳಲ್ಲಿಯೂ ವಿಘ್ನ ಬರಬಾರದು ಎಂದಾದರೆ ಶ್ರೀ ಹರಿಯ ಸ್ಮರಣೆಯನ್ನು ತಪ್ಪದೇ ಮಾಡಿ. ದೇವರ ಸ್ಮರಣೆ ಒಂದನ್ನು ಬಿಟ್ಟು ಬೇರೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ನಂದ ಭಗವಂತನ ಸ್ಮರಣೆಯನ್ನು ಮಾಡುತ್ತ ನಿಶ್ಚಿಂತನಾಗಿದ್ದಾನೆ.

ಇಲ್ಲಿ ಅವತಾರ ಮಾಡಿದ್ದು ಶ್ರೀಕೃಷ್ಣ ಪರಮಾತ್ಮ. ಶ್ರೀಕೃಷ್ಣನ ಸ್ಮರಣೆ ಮಾತ್ರದಿಂದ ವಿಘ್ನಗಳು ದೂರ ಹೋಗುವಾಗ ಕೃಷ್ಣನಿಗೆ ವಿಘ್ನಗಳು ಬರುವ ಪ್ರಸಕ್ತಿಯೇ ಇಲ್ಲ ಆದರೂ ತನ್ನ ಕರ್ತವ್ಯ ಎಂದು ಭಾವಿಸಿ ನಂದ ಶ್ರೀಕೃಷ್ಣನ ಸ್ಮರಣೆಯನ್ನು ಮಾಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net