

ಮದನಪಲ್ಲಿ (ಆಂಧ್ರಪ್ರದೇಶ): ಇಲ್ಲಿನ ಚಿತ್ತೂರ್ ಜಿಲ್ಲೆಯ ಮದನಪಲ್ಲಿಯಲ್ಲಿ ನಡೆದ ಸಹೋದರಿಯರಿಬ್ಬರ ಬರ್ಬರ ಹತ್ಯೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಬೀಳಿಸಿದ್ದು, ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ತಂದೆ-ತಾಯಿಯೇ ಮೌಢ್ಯಕ್ಕೆ ಬಿದ್ದು ಮಕ್ಕಳಿಬ್ಬರನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು.
ಇದಾದ ಬಳಿಕ ಅಕ್ಕನೇ ತಂಗಿಯನ್ನು ಕೊಂದು, ಆಮೇಲೆ ತನ್ನನ್ನು ಕೊಂದುಬಿಡಿ ಎಂದು ತಂದೆ-ತಾಯಿಯ ಬಳಿ ಕೇಳಿಕೊಂಡಳು ಎಂಬ ವಿಚಾರ ವೇಳೆ ಬಹಿರಂಗವಾಗಿತ್ತು. ಇದೇ ಪ್ರಕರಣ ಸಂಬಂಧ ಪೊಲೀಸರು ಸಂಪೂರ್ಣ ಮಾಹಿತಿ ಕಲೆಹಾಕಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆರೋಪಿ ದಂಪತಿ ಪುರುಷೋತ್ತಮ್ ನಾಯ್ಡು-ಪದ್ಮಜಾರ ಹೆಣ್ಣುಮಕ್ಕಳಾದ ಅಲೈಖ್ಯಾ (27) ಮತ್ತು ಸಾಯಿ ದಿವ್ಯಾ (22) ಕೊಲೆಗೂ ಮುನ್ನ ಅವರ ಇನ್ಸ್ಟಾಗ್ರಾಂ ಪೋಸ್ಟ್ ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.
"ನಮ್ಮ ಕೆಲಸ ಮುಗಿದಿದೆ.... ಶಿವ ಬರುತ್ತಿದ್ದಾನೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಅಲೈಖ್ಯಾ ಪೋಸ್ಟ್ ಮಾಡಿರುವುದು ತಿಳಿದುಬಂದಿದೆ. ಪುನರ್ಜನ್ಮ ಮೇಲೆ ಅತಿಯಾದ ನಂಬಿಕೆಯೇ ಭೀಕರ ಕೊಲೆಗೆ ಕಾರಣ ಎಂದು ಪೊಲೀಸರು ನಂಬಿದ್ದು, ದಂಪತಿಯ ಹಿರಿಯ ಮಗಳು ಅಲೈಖ್ಯಾ ಒಮ್ಮೆ ತಮ್ಮ ಸಾಕುನಾಯಿಯ ಮೇಲೆ ಪುನರ್ಜನ್ಮ ಪ್ರಯೋಗ ಮಾಡಿದ್ದಳಂತೆ.
ನಾಯಿಯನ್ನು ಕೊಂದು ಅದನ್ನು ಮರಳಿ ಪಡೆದುಕೊಂಡು ಬಂದಿದ್ದಾಗಿ ಅಲೈಖ್ಯಾ ಹೇಳಿದ್ದಳಂತೆ. ಇದನ್ನೇ ನಂಬಿದ್ದ ದಂಪತಿ ಸಾಯಿದಿವ್ಯ ಮೇಲೆ ಪ್ರಯೋಗ ಮಾಡಲು ಮುಂದಾದರಂತೆ. ಮೊದಲ ಸಾಯಿದಿವ್ಯಾಳನ್ನು ಅಲೈಖ್ಯಾಳೇ ಕೊಂದಳು ಎಂದು ಪಾಲಕರು ಹೇಳಿಕೊಂಡಿದ್ದು, ನಂತರ ತನ್ನನ್ನು ಕೊಲ್ಲುವಂತೆ ಪಾಲಕರ ಬಳಿಕ ಅಲೈಖ್ಯಾ ಕೇಳಿಕೊಂಡಳಂತೆ.
ಸತ್ತ ಸಹೋದರಿಯ ಆತ್ಮವನ್ನು ಮರಳಿ ತರಲು ತನ್ನ ಪ್ರಾಣವನ್ನು ತೆಗೆಯುವಂತೆ ಅಲೈಖ್ಯಾ ತಾಯಿ ಬಳಿ ಕೇಳಿಕೊಂಡಳಂತೆ. ಈ ಸಮಯದಲ್ಲಿ ಪುರುಷೋತ್ತಮ್ ಸಹ ಅವರ ಜತೆಯಲ್ಲಿಯೇ ಇದಿದ್ದಾಗಿ ಹೇಳಿದ್ದಾರೆ.
ಪುನರ್ಜನ್ಮ ನಂಬಿಕೆ ಹುಟ್ಟಿಕೊಂಡಿದ್ಹೇಗೆ?
2021ರ ಜನವರಿ ಆರಂಭದಲ್ಲಿ ಸಾಯಿ ದಿವ್ಯಾ ಆರೋಗ್ಯ ಹದಗೆಟ್ಟಿತ್ತು. ಈ ವೇಳೆ ಆಕೆಯ ಆರೋಗ್ಯ ಸುಧಾರಣೆಗೆಂದು ಪಾಲಕರು ತಮಿಳುನಾಡು, ಕರ್ನಾಟಕ ಮತ್ತು ಕೇರಳದಿಂದ ಮಂತ್ರವಾದಿಗಳನ್ನು ಕರೆಸಿದ್ದರಂತೆ. ಇದಾದ ಬಳಿಕ ಸಾಯಿದಿವ್ಯಾಳ ರೋಗ ಗುಣಪಡಿಸಲು ಅಕ್ಕ ಅಲೈಖ್ಯಾ, ಅತೀಂದ್ರೀಯ ಶಕ್ತಿ ಕುರಿತ ಸಂಶೋಧನೆ ಆರಂಭಿಸಿದ್ದಳಂತೆ. ತಂಗಿಯ ಆರೋಗ್ಯ ಗುಣವಾಗಬೇಕಾದರೆ, ತ್ಯಾಗ ಮುಖ್ಯವಾಗಿದೆ ಎಂದಿದ್ದಳಂತೆ. ಇಬ್ಬರನ್ನು ಕೊಂದು ಬಿಡಿ ಮಾರನೇ ದಿನ ಮರಳಿ ಜನಿಸುತ್ತೇವೆ ಎಂದು ಹೇಳಿದಳೆಂದು ಬಂಧಿತ ದಂಪತಿ ವಿಚಾರಣೆ ವೇಳೆ ಹೇಳಿದ್ದಾರೆ.
ವೈದ್ಯರು ಹೇಳುವುದೇನು?
ಆಸ್ಪತ್ರೆಯ ವೈದ್ಯರು ಹೇಳುವ ಪ್ರಕಾರ ಪದ್ಮಜಾ ಕೆಲವು ತಿಂಗಳುಗಳಿಂದ ಭ್ರಮೆಗೆ ಒಳಗಾಗಿದ್ದಳಂತೆ. ಭ್ರಮಾತ್ಮಕ ವಿಚಾರಗಳಿಂದ ಹೆಚ್ಚು ಪ್ರಭಾವಿತರಾಗಿದ್ದರಂತೆ. ಇಡೀ ಕುಟುಂಬವೇ ಭ್ರಮೆಗೆ ಒಳಗಾಗಿದ್ದರಂತೆ. ಇದು ಕೊನೆಯಲ್ಲಿ ಕೊಲೆಗೆ ಮುನ್ನುಡಿ ಬರೆದಿದೆ ಎಂದು ತಿಳಿಸಿದ್ದಾರೆ. ಕೊಲೆ ನಡೆದ ಸಮಯದಲ್ಲಿ ಎಲ್ಲರೂ ಮೈಮರೆತ ಸ್ಥಿತಿಯಲ್ಲಿದ್ದರು ಎಂದು ಪೊಲೀಸರು ಸಹ ತಿಳಿಸಿದ್ದಾರೆ.
ಇನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿರುವುದು ಡಬಲ್ ಮರ್ಡರ್ ಪ್ರಕರಣ ಪೊಲೀಸರಿಗೆ ತಲೆನೋವಾಗಿದೆ. ಪ್ರಕರಣದ ತಾರ್ಕಿಕ ಅಂತ್ಯ ಕಂಡುಕೊಳ್ಳಲು ಪೊಲೀಸರು ಗಂಭೀರ ತನಿಖೆ ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಸುಶಿಕ್ಷಿತ ಕುಟುಂಬವೊಂದು ಹೇಗೆ ಇಂತಹ ಮೌಢ್ಯಕ್ಕೆ ಕಟ್ಟುಬಿದ್ದರು ಎಂಬುದೇ ಇದೀಗ ಪ್ರಕರಣದ ಪ್ರಮುಖ ಚರ್ಚೆಯಾಗಿದೆ. ತಂದೆ ಸರ್ಕಾರಿ ಶಾಲೆಯ ಪ್ರಾಂಶುಪಾಲ. ತಾಯಿ ಗಣಿತದಲ್ಲಿ ಗೋಲ್ಡ್ ಮೆಡಲಿಸ್ಟ್ ಮತ್ತು ಸ್ವಂತ ಕಾಲೇಜು ನಡೆಸುತ್ತಿದ್ದರಿ. ಅಲೈಖ್ಯಾ ಅರಣ್ಯಾಧಿಕಾರಿಯಾಗಿದ್ದಳು. ಸಾಯಿದಿವ್ಯಾ ಎಂಬಿಎ ಮುಗಿಸಿ, ಚೆನ್ನೈನ ರೆಹಾಮಾನ್ ಮ್ಯೂಸಿಕ್ ಸಂಸ್ಥೆಯಲ್ಲಿ ಮ್ಯೂಸಿಕ್ ಕಲಿಯುತ್ತಿದ್ದಳು. (ಏಜೆನ್ಸೀಸ್)