

ಭುವನೇಶ್ವರ: ಇಡೀ ಜಗತ್ತನ್ನೇ ತಲ್ಲಣಗೊಳಿಸುವ ಮಹಾಮಾರಿ ಕರೊನಾ ಸೋಂಕನ್ನು ಮಣಿಸಲು ನಡೆಯುತ್ತಿರುವ ಹೋರಾಟ ಅಷ್ಟಿಷ್ಟಲ್ಲ. ಶಾಶ್ವತ ಔಷಧಕ್ಕಾಗಿ ಇಡೀ ವಿಶ್ವವೇ ಹಾತೊರೆಯುತ್ತಿದೆ. ಇದೀಗ ಕೋವಿಡ್ಗೆ 'ಕೆಂಪು ಇರುವೆ' ಮದ್ದು ಎಂಬ ಚರ್ಚೆ ಶುರುವಾಗಿದೆ.
ಕೆಂಪಿರುವೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ-21, ಫಾರ್ಮಿಕ್ ಆ್ಯಸಿಡ್ , ಸತ್ತು, ಕಬ್ಬಿಣಾಂಶವಿದ್ದು, ಒಟ್ಟಾರೆ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತೆ. ಹಾಗಾಗಿ ಈ ಕೆಂಪಿರುವೆ ಬುಡಕಟ್ಟು ಜನಾಂಗದ ಪ್ರಮುಖ ಆಹಾರ. ಉಸಿರಾಟ ಸಮಸ್ಯೆ ಮತ್ತು ಜ್ವರ ನಿವಾರಕ, ಕಫ ಕರಗಿಸುವಿಕೆ, ಶೀತ ಕಡಿಮೆ ಮಾಡುವ ಗುಣವುಳ್ಳ ಕೆಂಪಿರುವೆ ಬುಡಕಟ್ಟು ಜನರ ಪಾಲಿಗೆ ಔಷಧದ ಆಗರ. ಕಾಲಕ್ಕೆ ತಕ್ಕಂತೆ ರೋಗ ನಿರೋಧಕ ಶಕ್ತಿ ಉತ್ಪತ್ತಿ ಮಾಡುವ ಗುಣವುಳ್ಳ ಕೆಂಪಿರುವೆಯಿಂದ ಕೋವಿಡ್ಗೆ ಮದ್ದು ಸಿಗಲಿದೆಯೇ? ಎಂಬ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಸಂಶೋಧನೆ ನಡೆಸಲು ಆಯುಷ್ ಸಚಿವಾಲಯಕ್ಕೆ ಒಡಿಶಾ ಹೈಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿರಿ: ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ
ಕೆಂಪಿರುವೆಯಲ್ಲಿ ರೋಗನಿರೋಧಕ ಶಕ್ತಿ ಇರುವ ಹಾಗೂ ಅದರಿಂದ ತಯಾರಿಸಿದ ಚಟ್ನಿ ಸೇವನೆಯಿಂದ ಕೋವಿಡ್ ಸೋಂಕು ನಿಯಂತ್ರಣ ಸಾಧ್ಯತೆ ಮತ್ತು ಅಸಾಧ್ಯತೆ ಬಗ್ಗೆ ಸಂಶೋಧನೆ ನಡೆಸಬೇಕು ಎಂದು ಇಂಜಿನಿಯರೊಬ್ಬರು ಒಡಿಶಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೆಂಪಿರುವೆಯಲ್ಲಿ ಕೋವಿಡ್ ವೈರಸ್ ಕೊಲ್ಲುವ ಔಷಧ ಗುಣ ಇದೆಯೇ? ಎಂಬುದರ ಬಗ್ಗೆ ಸಂಶೋಧನೆ ಮಾಡಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಆಯುಷ್ ಸಚಿವಾಲಯ ಹಾಗೂ ಕೌನ್ಸಿಲ್ ಆಫ್ ಮೆಡಿಕಲ್ ಆ್ಯಂಡ್ ರಿಸರ್ಚ್ಗೆ ನಿರ್ದೇಶಿಸಿದೆ.
ಜಾರ್ಖಾಂಡ್, ಆಂಧ್ರ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ತ್ರಿಪುರ, ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವೆಡೆ ಬುಡಕಟ್ಟು ಜನಾಂಗ ಕೆಂಪಿರುವೆ ಚಟ್ನಿ ಸೇವಿಸುವುದು ಸಾಮಾನ್ಯ. ಕರ್ನಾಟಕದಲ್ಲಿ ಬುಡಕಟ್ಟು ಜನಾಂಗ ಮಾತ್ರವಲ್ಲದೆ ಮಲೆನಾಡು ಭಾಗದ ಕೆಲ ಜನರು ಕೆಂಪಿರುವೆ ಚಟ್ನಿ ಸೇವಿಸುತ್ತಾರೆ.
ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಕೋವಿಡ್ ಸೋಂಕಿನ ವಿರುದ್ಧ ಹೋರಾಡಬಹುದು ಎಂಬ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದೀಗ ಕೆಂಪಿರುವೆ ಚಟ್ನಿ ಸೇವನೆಯೂ ಹೆಚ್ಚು ಪರಿಣಾಮಕಾರಿ ಎಂಬ ಚರ್ಚೆಗಳು ಶುರುವಾಗಿದ್ದು, ಸಂಶೋಧನಾ ವರದಿಯತ್ತ ಎಲ್ಲರ ಚಿತ್ತ ನೆಟ್ಟಿದೆ.