

ನವದೆಹಲಿ: ದೇಶದ್ರೋಹದ ಕಾನೂನಿನ ನಿಬಂಧನೆ ಗಳನ್ನು ಮರುಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಬ್ರಿಟಿಷ್ ಕಾಲದ ಈ ಕಾನೂನಿನ ಅಗತ್ಯದ ಬಗ್ಗೆ ಮರುಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ ನಂತರ ಸುಪ್ರೀಂಕೋರ್ಟ್ ಮುಂದೆ ಕೇಂದ್ರ ಸರ್ಕಾರದ ವಕೀಲರು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿದ್ದಾರೆ. ವಸಾಹತುಶಾಹಿ ಕಾನೂನನ್ನು ಪ್ರಶ್ನಿಸುವ ಅರ್ಜಿಗಳನ್ನು ಪರಿಗಣಿಸದಂತೆ ಮತ್ತು ಕೇಂದ್ರದ ಮರುಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಕಾಯುವಂತೆ ಸರ್ಕಾರ ಕೇಳಿಕೊಂಡಿದೆ. ದೇಶದ್ರೋಹದ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಅರ್ಜಿದಾರರ ವಿಚಾರಣೆಯನ್ನು ಮೇ 10ಕ್ಕೆ ಈ ಹಿಂದೆ ನಿಗದಿಪಡಿಸಲಾಗಿತ್ತು.
ಮರುಪರಿಶೀಲನೆ ಬಗ್ಗೆ ಕೇಂದ್ರ 3 ಪುಟಗಳ ಅಫಿಡವಿಟ್ ಸಲ್ಲಿಸಿದ್ದು, ‘ರಾಷ್ಟ್ರದ ಸಾರ್ವಭೌಮತ್ವ ಕಾಪಾಡಿಕೊಳ್ಳಲು ಮತ್ತು ಹಳೆಯ ವಸಾಹತುಶಾಹಿ ಕಾನೂನು ತೆಗೆದುಹಾಕಲು ಬದ್ಧವಾಗಿದ್ದೇವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ವೇಳೆ ಸರ್ಕಾರ ವಸಾಹತುಶಾಹಿ ಕಾನೂನುಗಳಿಂದ ಹೊರಬರುವ ಕೆಲಸ ಮಾಡುತ್ತಿದೆ. ಹಳೆಯ ಕಾನೂನುಗಳನ್ನು ಪರಿಶೀಲಿಸುವುದು ಮತ್ತು ರದ್ದುಗೊಳಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ಸರ್ಕಾರ 2014-15ರಿಂದ 1,500 ಹಳೆಯ ಕಾನೂನುಗಳನ್ನು ರದ್ದುಗೊಳಿಸಿದೆ’ ಎಂದು ಮಾಹಿತಿ ನೀಡಲಾಗಿದೆ.
ಯೂ ಟರ್ನ್ ಏಕೆ?: ದೇಶದ್ರೋಹ ಕಾನೂನನ್ನು ಎತ್ತಿಹಿಡಿಯುವ ಕೇದಾರನಾಥ್ ಸಿಂಗ್ ವರ್ಸಸ್ ಬಿಹಾರ ಸರ್ಕಾರ ಪ್ರಕರಣದ ತೀರ್ಪು ಕ್ರಮಬದ್ಧವಾಗಿದೆ ಮತ್ತು ಅದನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ಗೆ ಕೆಲ ದಿನಗಳ ಹಿಂದೆ ತಿಳಿಸಿತ್ತು. ಆದರೆ, ಹಠಾತ್ ಬೆಳವಣಿಗೆಯಲ್ಲಿ ಕೇಂದ್ರ ತನ್ನ ನಿಲುವು ಬದಲಿಸಿದೆ. ದೇಶದ್ರೋಹದ ಕಾನೂನಿನ ಸಿಂಧುತ್ವ ಎತ್ತಿಹಿಡಿದ ಕೇದಾರನಾಥ ತೀರ್ಪು ಸ್ಥಾಪಿತ ಕಾನೂನಾಗಿದೆ. ಇದನ್ನು ವಿಸõತ ಪೀಠ ಹೊರತುಪಡಿಸಿ ಮೂವರು ಸದಸ್ಯರ ನ್ಯಾಯಪೀಠ ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ ಎಂದು ಕೇಂದ್ರ ಅಭಿಪ್ರಾಯಪಟ್ಟಿತ್ತು.
ಏನಿದು ಕಾನೂನು?:ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124 ಎ ಪ್ರಕಾರ ಒಬ್ಬ ವ್ಯಕ್ತಿಯು ದ್ವೇಷ ಅಥವಾ ಆಕ್ಷೇಪಾರ್ಹವಾಗಿ ವರ್ತಿಸುವ ಕೃತ್ಯ ಎಸಗಿದರೆ ಅಥವಾ ಕಾನೂನಿನ ಪ್ರಕಾರ ಸ್ಥಾಪಿಸಲಾದ ಸರ್ಕಾರದ ಬಗ್ಗೆ ವಿನಾಕಾರಣ ಆಕ್ರೋಶ ಪ್ರಚೋದಿಸಿದರೆ ಅದನ್ನು ದೇಶದ್ರೋಹದ ಅಪರಾಧದ ಅಡಿಯಲ್ಲಿ ನೋಡಬೇಕಾಗುತ್ತದೆ. ಇದಕ್ಕೆ ಗರಿಷ್ಠ ಪ್ರಮಾಣದ ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದಾಗಿದೆ.