ಒಂದು ಮುತ್ತಿನ ಕಥೆ: ಮದುವೆಯಂತೂ ತ್ವರಿತ, ಅದು ಬಿಂದುವಲ್ಲ ಹರಿತ!; ಖ್ಯಾತ ನಟನ ಸ್ಪಷ್ಟೀಕರಣ..

Rahul Ramakrishna
Published on

ಬೆಂಗಳೂರು: ಚಲನಚಿತ್ರ ನಟ-ನಟಿಯರ ಮದುವೆ ವಿಚಾರಗಳು ಸಿನಿಮಾಪ್ರಿಯರ ಹಾಗೂ ಅಭಿಮಾನಿಗಳ ಕುತೂಹಲ ಕೆರಳಿಸುವುದಂತೂ ಖಚಿತ. ಅದೇ ಕಾರಣಕ್ಕೆ ಅವು ಭಾರಿ ಗಮನ ಸೆಳೆಯುತ್ತವೆ. ಅದೇ ರೀತಿ ಖ್ಯಾತನಟರೊಬ್ಬರ ಮದುವೆ ವಿಚಾರ ಒಂದು ಮುತ್ತಿನ ಹಿನ್ನೆಲೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಬಳಿಕ ನಟ ಸ್ಪಷ್ಟೀಕರಣ ಕೂಡ ನೀಡುವಂತಾಗಿದೆ.

ತೆಲುಗಿನ ಖ್ಯಾತ ನಟ ರಾಹುಲ್ ರಾಮಕೃಷ್ಣ ತಮ್ಮ ಮದುವೆ ವಿಚಾರವಾಗಿ ತಾವು ಮದುವೆಯಾಗಲಿರುವ ಯುವತಿಯೊಂದಿಗಿನ ಫೋಟೋ ಸಹಿತ ಮಾಹಿತಿ ಹಂಚಿಕೊಂಡಿದ್ದಲ್ಲದೆ, ಕೆಲವೇ ಗಂಟೆಗಳಲ್ಲಿ ಆ ವಿಷಯವಾಗಿ ಸ್ಪಷ್ಟೀಕರಣವನ್ನು ಕೂಡ ಕೊಡುವಂತಾಗಿದೆ.

ಯುವತಿಯೊಬ್ಬಳ ತುಟಿಗೆ ತುಟಿ ಹಚ್ಚಿ ಮುತ್ತು ಕೊಟ್ಟ ಫೋಟೋವೊಂದನ್ನು ನಿನ್ನೆ ಬೆಳಗಿನ ಜಾವ ಟ್ವಿಟರ್​ನಲ್ಲಿ 'ಕೊನೆಗೂ ಮದುವೆ ಆಗಲಿದ್ದೇನೆ, ಶೀಘ್ರದಲ್ಲೇ..' ಎಂಬ ಕ್ಯಾಪ್ಷನ್​ನೊಂದಿಗೆ ನಟ ರಾಹುಲ್ ಹಂಚಿಕೊಂಡಿದ್ದರು. ಆದರೆ ಅದಾಗಿ ಕೆಲವೇ ಗಂಟೆಗಳಲ್ಲಿ 'ಸಣ್ಣ ತಿದ್ದುಪಡಿ' ಎಂಬುದಾಗಿ ಸ್ಟಷ್ಟೀಕರಣವನ್ನೂ ನೀಡಿದ್ದಾರೆ.

ಆ ಫೋಟೋ ಪೋಸ್ಟ್​ ಆದ ಬೆನ್ನಿಗೇ ಅವರ ಅಭಿಮಾನಿಗಳು ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರು. ಅಂದರೆ ರಾಹುಲ್ ತಮ್ಮ ಹಳೆಯ ಗರ್ಲ್​ಫ್ರೆಂಡ್​ ಬಿಂದುವನ್ನೇ ಮದುವೆ ಆಗುತ್ತಿರಬಹುದು ಎಂದು ಭಾವಿಸಿ ಪ್ರತಿಕ್ರಿಯಿಸಿದ್ದರು. ಏಕೆಂದರೆ ಅವರಿಬ್ಬರೂ ಮದುವೆ ಆಗಲಿದ್ದಾರೆ ಎಂಬುದು ಕೆಲವೇ ವರ್ಷಗಳ ಹಿಂದೆ ಬಹಳ ಸುದ್ದಿ ಆಗಿತ್ತು. ಆದರೆ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ರಾಹುಲ್ ಕೆಲವೇ ಗಂಟೆಗಳಲ್ಲಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. 'ಸಣ್ಣ ತಿದ್ದುಪಡಿ.. ನಾನು ಮದುವೆ ಆಗಲಿರುವುದು ಬಿಂದುವನ್ನಲ್ಲ, ಹರಿತಳನ್ನು..' ಎಂಬುದಾಗಿ ಹೇಳಿಕೊಂಡಿದ್ದಾರೆ.

ಪತ್ರಕರ್ತರೂ ಆಗಿದ್ದ ಹಾಗೂ ಲೇಖಕರೂ ಆಗಿರುವ ನಟ ರಾಹುಲ್, ಸೈನ್ಮಾ ಎಂಬ ಕಿರುಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದರು. ಬಳಿಕ 2017ರಲ್ಲಿ ತೆಲುಗಿನ ಯಶಸ್ವಿ ಸಿನಿಮಾ ಅರ್ಜುನ್ ರೆಡ್ಡಿ ಮೂಲಕ ದೊಡ್ಡ ಪ್ರಮಾಣದಲ್ಲಿ ಗುರುತಿಸಿಕೊಂಡು ಖ್ಯಾತಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net