

ಹೈದರಾಬಾದ್: ಮುಂದಿನ ಕೆಲವೇ ದಿನಗಳಲ್ಲಿ ಮತದಾನ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರ ಮುಗಿಲು ಮುಟ್ಟಿದೆ. ಇದೀಗ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಪುತ್ರ, ಸಚಿವ ಕೆಟಿಆರ್ ಕರ್ನಾಟಕದಲ್ಲಿನ ರಿಯಲ್ ಎಸ್ಟೇಟ್ ಉದ್ಯಮದ ಕುರಿತು ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.
ಹೈದರಾಬಾದಿನಲ್ಲಿ ನಡೆದ ರಿಯಲ್ ಎಸ್ಟೇಟ್ ಸಮ್ಮಿಟ್ ಉದ್ಧೇಶಿಸಿ ಮಾತನಾಡಿದ ಕೆಟಿಆರ್ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಲ್ಲಿನ ರಿಯಲ್ ಎಸ್ಟೇಟ್ ಉದ್ಯಮ ಕುಸಿದಿದ್ದು, ಬೆಂಗಳೂರಿನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಜನರು ಗಮನಿಸಬೇಕು. ಆ ನಂತರ ನಿಮಗೆ ಇದರ ಬಗ್ಗೆ ತಿಳಿಯುತ್ತದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಿಯಲ್ ಎಸ್ಟೇಟ್ ಹಾಗೂ ಕನ್ಸ್ಟ್ರಕ್ಷನ್ ಉದ್ಯಮದಲ್ಲಿ ಶೇ. 28ರಷ್ಟು ಕುಸಿತ ಕಂಡಿದೆ. ಸ್ಥಿರ ಸರ್ಕಾರ ಮತ್ತು ಸಮರ್ಥ ನಾಯಕತ್ವ ಮಾತ್ರ ಪ್ರಗತಿಯನ್ನು ಸಾಧಿಸಬಹುದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದೇ ಗರಿಯಾಗುತ್ತದೆ. ಆದ್ದರಿಂದ ಎಲ್ಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ಕಾರವನ್ನು ಬೆಂಬಲಿಸಿ ಎಂದು ವಿನಂತಿಸಿದ್ದಾರೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣ ಕಂಡಿರುವ ಮುಖ್ಯಮಂತ್ರಿಗಳ ಪೈಕಿ ಕೆಸಿಆರ್ ಉತ್ತಮ ಹಾಗೂ ಸಮತೋಲಿತ ಆಡಳಿತವನ್ನು ನೀಡಿದ್ದಾರೆ. ದೇಶದಲ್ಲಿ ತೆಲಂಗಾಣ ಮಾಡೆಲ್ ಹೆಚ್ಚು ಪ್ರಸಿದ್ದಿ ಪಡೆದಿದ್ದು, ವಿಪಕ್ಷಗಳು ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ ಹೊರತು ಯಾರೋ ಕೆಲವರನ್ನು ಉದ್ದಾರ ಮಾಡಲು ಅಲ್ಲ ಎಂದು ರಿಯಲ್ ಎಸ್ಟೇಟ್ ಸಮ್ಮಿಟ್ನಲ್ಲಿ ಸಚಿವ ಕೆಟಿಆರ್ ಹೇಳಿದ್ದಾರೆ.
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂದಬರು ಲೋಕಸಭೆ ಎಲೆಕ್ಷನ್ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 119 ಸದಸ್ಯಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.