

Ranya Rao: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ನಟಿ ರನ್ಯಾ ರಾವ್ ವಿರುದ್ಧ ಇದೀಗ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ (CEIB), ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ (COFEPOSA) ಕಾಯ್ದೆ, 1974 (COFEPOSA) ಪ್ರಕರಣ ದಾಖಲಿಸಲಾಗಿದೆ.
ಜಾಮೀನು ಕೋರಿ ನಟಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅಂತಿಮವಾಗಿ ಬೇಲ್ ಕೊಡಲು ನಿರಾಕರಿಸಿದೆ. 'ಕಾಫಿಪೋಸಾ' ಕಾಯ್ಡೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಒಂದು ವರ್ಷ ರನ್ಯಾಗೆ ಜಾಮೀನು ಸಿಗುವುದಿಲ್ಲ. ಸದ್ಯ 'ಚಿನ್ನ'ದ ಹುಡುಗಿಗೆ ಜೈಲೇ ಗತಿಯಾಗಿದೆ. ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋದ COFEPOSA ವಿಭಾಗದ ಜಂಟಿ ಕಾರ್ಯದರ್ಶಿಯಾದ ಅನುಪಮ್ ಪ್ರಕಾಶ್ ಅವರು, ಏಪ್ರಿಲ್ 22, 2025ರಂದು ಹೊರಡಿಸಿದ ಆದೇಶದಲ್ಲಿ, ಭವಿಷ್ಯದಲ್ಲಿ ರನ್ಯಾ ಚಿನ್ನ ಕಳ್ಳಸಾಗಣೆ ಮಾಡುವುದನ್ನು ಅಥವಾ ಸಾಗಣೆ ಮಾಡಿದ್ದನ್ನು ಮರೆಮಾಚುವುದನ್ನು ಮತ್ತು ಕಳ್ಳಸಾಗಣೆ ಮಾಡುವುದನ್ನು ತಡೆಯುವ ಉದ್ದೇಶದಿಂದ" ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಉಲ್ಲೇಖವಾಗಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳಾದ ರನ್ಯಾ ರಾವ್ ಮತ್ತು ಇತರರು ಪದೇ ಪದೇ ಜಾಮೀನಿಗೆ ಅರ್ಜಿ ಹಾಕುತ್ತಿದ್ದರು. ಆದರೆ, ಕಾಫಿಪೋಸಾ ಕಾಯ್ದೆಯಡಿ ಒಂದು ವರ್ಷದ ಮಟ್ಟಿಗೆ ನಟಿಗೆ ಜಾಮೀನು ಸಿಗುವುದಿಲ್ಲ. ಜಾಮೀನಿಗೆ ಅರ್ಜಿ ಹಾಕಲು ಸಹ ಅವಕಾಶ ಇರುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ. ಈ ಮೂಲಕ ಸದ್ಯ ನಟಿಗೆ ಜೈಲು ಬಿಟ್ಟರೇ ಬೇರೇನೂ ಗತಿಯಿಲ್ಲ.
ಮಾ.03ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್ ಅವರಿಂದ 14.56 ಕೋಟಿ ರೂ. ಮೌಲ್ಯದ 14 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ಪೊಲೀಸರು, ಕೆಲವೇ ಕ್ಷಣದಲ್ಲಿ ನಟಿಯನ್ನು ಬಂಧಿಸಿ, ತನಿಖೆಗೆ ಒಳಪಡಿಸಿದರು. ಒಂದೇ ವರ್ಷದಲ್ಲಿ 27 ಬಾರಿ ದುಬೈಗೆ ಭೇಟಿ ನೀಡಿದ್ದ ಚೆಲುವೆ, 14.2 ಕೆಜಿ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದರು. ಅಧಿಕಾರಿಗಳ ಕಣ್ತಪ್ಪಿಸಿ ಇಷ್ಟೊಂದು ಚಿನ್ನವನ್ನು ಹೇಗೆ ಸಾಗಿಸುತ್ತಿದ್ದರು? ಇಂಥಾ ಕೆಲಸಕ್ಕೆ ‘ಮಾಣಿಕ್ಯ’ ನಟಿ ಕೈಹಾಕಿದ್ದೇಕೆ? ಎಂಬ ಗೊಂದಲ ಹಲವರಲ್ಲಿ ಮೂಡಿದೆ. ಸದ್ಯ ಇದಕ್ಕೆ ಉತ್ತರ ಹುಡುಕುತ್ತಿರುವ ಖಾಕಿ ಪಡೆ, ಪಾತ್ರಧಾರಿ ಹಿಂದಿರುವ ಸೂತ್ರಧಾರಿಗಾಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).