CSK ಆಯ್ತು ಈಗ SRH​; ಐಪಿಎಲ್​ ಬಲಿಷ್ಠ ತಂಡಗಳಿಗೆ ಆರ್​ಸಿಬಿಯೇ ಸ್ಫೂರ್ತಿ! ಕೊಹ್ಲಿ ಪಡೆ ಬಗ್ಗೆ ನಿತೀಶ್​ ರೆಡ್ಡಿ ಮಾತು | RCB

ವಿಜಯವಾಣಿ (78)
Published on

RCB: ನಿನ್ನೆ (ಏ.25) ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಎಸ್​ಆರ್​ಎಚ್​ ಮತ್ತು ಸಿಎಸ್​ಕೆ ನಡುವಿನ ಪಂದ್ಯದಲ್ಲಿ ಪ್ಯಾಟ್​ ಕಮ್ಮಿನ್ಸ್​ ಪಡೆ 5 ವಿಕೆಟ್​ಗಳ ಸುಲಭ ಗೆಲುವನ್ನು ದಾಖಲಿಸಿತು. ಈ ಪಂದ್ಯದಲ್ಲಿ ಉತ್ತಮ ಆಲ್​ರೌಂಡ್ ಪ್ರದರ್ಶನ ನೀಡಿದ ಸನ್​ರೈಸರ್ಸ್​ ತಂಡ ಐಪಿಎಲ್​ ಪ್ಲೇಆಫ್​ಗೆ ಲಗ್ಗೆಯಿಡುವ ಭರವಸೆಯನ್ನು ಗಟ್ಟಿಯಾಗಿಸಿದೆ.

20 ಓವರ್​ನಲ್ಲಿ ಕೇವಲ 154 ರನ್ ಕಲೆಹಾಕಿದ ಸಿಎಸ್​ಕೆಗೆ ಡಿವಾಲ್ಡ್​ ಬ್ರೇವಿಸ್​ ಮತ್ತು ಆಯುಷ್​ ಮಾತ್ರೆ ಹೊರತುಪಡಿಸಿ ಉಳಿದ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದು ಸಿಎಸ್​ಕೆ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಕುರಿತು ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ಬೇಸರವನ್ನು ಹೊರಹಾಕಿದರು. ಬ್ಯಾಟಿಂಗ್​ ಯೂನಿಟ್​ ಮಾತ್ರವಲ್ಲದೇ ಬೌಲಿಂಗ್ ಕೂಡ ಕಳಪೆಯಾದ ಹಿನ್ನೆಲೆ ಸಿಎಸ್​ಕೆ ಪ್ಲೇಆಫ್​ ಕನಸು ಸಂಪೂರ್ಣವಾಗಿ ಭಗ್ನಗೊಂಡಿದೆ.

ಇನ್ನು ಗೆಲುವಿನ ಮಂದಹಾಸ ಹೊತ್ತು ಸಾಗಿರುವ ಸನ್​ರೈಸರ್ಸ್​ ಹೈದರಾಬಾದ್​ ಪರ ನಿತೀಶ್ ಕುಮಾರ್​ ರೆಡ್ಡಿ ಮಾತನಾಡಿ, "ಈ ಪಂದ್ಯ ಗೆದ್ದಿದ್ದು ನಮಗೆ ಉತ್ಸಾಹ ಹೆಚ್ಚಿದೆ. ಮುಂದಿನ ಐದು ಪಂದ್ಯಗಳನ್ನು ಗೆಲ್ಲಲೇ ಬೇಕಿದೆ. ಈ ವಿಷಯದಲ್ಲಿ ನಮಗೆ ಆರ್​ಸಿಬಿ ಸ್ಫೂರ್ತಿ. ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಇದೇ ಪರಿಸ್ಥಿತಿಯಲ್ಲಿತ್ತು. 10ನೇ ಸ್ಥಾನದಲ್ಲಿದ್ದ ಬೆಂಗಳೂರು ತಂಡ, 7ಕ್ಕೆ 7 ಪಂದ್ಯವನ್ನು ಗೆದ್ದು ಪ್ಲೇಆಫ್​ಗೆ ಲಗ್ಗೆಯಿಟ್ಟಿತು. ಅದೇ ರೀತಿ ನಾವು ಕೂಡ ಮುನ್ನುಗ್ಗುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಸ್​ಆರ್​ಎಚ್​ ನಡುವಿನ ಪಂದ್ಯಕ್ಕೂ ಮೊದಲು ಮಾತನಾಡಿದ್ದ ಸಿಎಸ್​ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್​, "ಕಳೆದ ವರ್ಷ ಆರ್​ಸಿಬಿ ಬ್ಯಾಕ್​ ಟು ಬ್ಯಾಕ್​ ಗೆದ್ದ ರೀತಿಯಲ್ಲೇ ನಾವು ಗೆಲ್ಲುತ್ತೇವೆ. ನಮಗಿನ್ನೂ ಅವಕಾಶವಿದೆ. ಆರ್​ಸಿಬಿಯಂತೆ ಕಮ್​ಬ್ಯಾಕ್ ಮಾಡುತ್ತೇವೆ" ಎಂದು ಹೇಳಿದ್ದರು. ಒಟ್ಟಿನಲ್ಲಿ ಅಂಕಪಟ್ಟಿಯಲ್ಲಿ ಕೆಳಗಿರುವ ತಂಡಗಳಿಗೆ ಆರ್​ಸಿಬಿ ಕೊಟ್ಟಿದ್ದ ಅದ್ಭುತ ಪ್ರದರ್ಶನ ಸ್ಫೂರ್ತಿದಾಯಕವಾಗಿದೆ ಎಂದರೆ ಖಂಡಿತ ತಪ್ಪಾಗಲಾರದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net