

Mrunal Thakur: ‘ಸೀತಾ ರಾಮಂ’ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಮೃಣಾಲ್ ಠಾಕೂರ್ ಇದೀಗ ತಮಿಳು, ತೆಲುಗು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ, ಅಪಾರ ಸಂಖ್ಯೆಯ ಸಿನಿಪ್ರೇಕ್ಷಕರನ್ನು ಸಂಪಾದಿಸಿದ್ದಾರೆ. 'ಸೀತಾ ರಾಮಂ', 'ಹಾಯ್ ನಾನ್ನ' ಸೇರಿದಂತೆ ಸೂಪರ್ಹಿಟ್ ಚಿತ್ರಗಳಲ್ಲಿ ನಟಿಸಿ, ಪ್ರೇಕ್ಷಕರಿಂದ ಸೈ ಎನಿಸಿಕೊಂಡಿರುವ ಮೃಣಾಲ್ ಇದೀಗ ನಿರ್ದೇಶಕ ಅಟ್ಲಿ ಕುಮಾರ್ ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುಂಬರುವ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ.
'ಜವಾನ್' ಮೂಲಕ ಬಾಲಿವುಡ್ನಲ್ಲಿ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡ ಅಟ್ಲಿ, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅವರ ಜತೆಗೆ ಬಹುನಿರೀಕ್ಷಿತ ಸಿನಿಮಾಗೆ ಕೈಜೋಡಿಸಿದ್ದಾರೆ. ಇದು ಬಿಗ್ ಬಜೆಟ್ ಚಿತ್ರ ಎಂದು ಹೇಳಲಾಗಿದ್ದು, ಐಕಾನ್ ಸ್ಟಾರ್ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಈ ಹಿಂದಿನಿಂದಲೂ ಹರಿದಾಡುತ್ತಿದೆ. ಈ ಮಧ್ಯೆ ಹೊಸ ಸುದ್ದಿಯೊಂದು ಸಿನಿಪ್ರಿಯರ ಕುತೂಹಲವನ್ನು ಕೆರಳಿಸಿದ್ದು, ಮೂವರು ನಟಿಯರ ಪೈಕಿ ಅಟ್ಲಿ-ಅಲ್ಲು ಅರ್ಜುನ್ ಸಿನಿಮಾಗೆ ಮೃಣಾಲ್ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ವದಂತಿಯಾಗಿ ಹರಿದಾಡುತ್ತಿದ್ದು, ಚಿತ್ರತಂಡ ಘೋಷಿಸಲಿರುವ ಅಧಿಕೃತ ಮಾಹಿತಿಗಾಗಿ ಕಾದು ನೋಡಬೇಕಿದೆ. ಅಸಲಿಗೆ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಮೂವರು ನಟಿಮಣಿಯರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಮೂವರ ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇರಲಿದೆ ಎಂದು ಅಟ್ಲಿ ಹೇಳಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಮೃಣಾಲ್ ಪಾತ್ರ ಬಹಳ ವಿಶೇಷವಾಗಿದ್ದು, ಅವರ ಪಾತ್ರಕ್ಕೆ ಹೆಚ್ಚು ತೂಕವಿದೆ ಎಂದು ಸಿನಿ ವರದಿಗಳು ತಿಳಿಸಿವೆ,(ಏಜೆನ್ಸೀಸ್).