

Actress Anupriya: ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮಗಾದ ಕಹಿ ಅನುಭವದ ಕುರಿತು ಮುಕ್ತವಾಗಿ ಮಾತನಾಡಿದ ಬಾಲಿವುಡ್ ನಟಿ ಅನುಪ್ರಿಯಾ ಗೋಯೆಂಕಾ, ಕಿಸ್ಸಿಂಗ್ ಸೀನ್ ಚಿತ್ರೀಕರಣದಲ್ಲಿ ಸಹ ನಟ ಮಾಡಿದ ರೀತಿ ತನಗೆ ಸ್ವಲ್ಪವು ಇಷ್ಟವಾಗಲಿಲ್ಲ ಎಂದಿದ್ದಾರೆ.
'ಪೋಟುಗಡು' ಮತ್ತು 'ಶೋಲಾ' ಸಿನಿಮಾಗಳ ಮೂಲಕ ತೆಲುಗು ಚಿತ್ರಗಳಲ್ಲಿ ಮನ್ನಣೆ ಗಳಿಸಿರುವ ಈ ಬ್ಯೂಟಿ, 'ಟೈಗರ್ 3' ಮತ್ತು 'ಪದ್ಮಾವತ್' ಸಿನಿಮಾ ಸೇರಿದಂತೆ 'ಪಾಂಚಾಲಿ', 'ಅಸುರ್' ಮತ್ತು 'ಆಶ್ರಮ'ದಂತಹ ವೆಬ್ ಸರಣಿಗಳಲ್ಲಿ ಅಭಿನಯಿಸಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ಹೆಚ್ಚು ಸದ್ದು ಮಾಡುವ ಅನುಪ್ರಿಯಾ, ಚಿತ್ರದ ಕಥೆಗೆ ಅಂತಹ ಸೀನ್ಗಳು ಅಗತ್ಯವಿದ್ದರೆ, ಖಂಡಿತ ತಾವು ನಟಿಸುವುದಾಗಿ ತಿಳಿಸುತ್ತಾರೆ. ಅಂತೆಯೇ ಹಲವು ಸಿನಿಮಾಗಳಲ್ಲಿ ಹಾಟ್-ಬೋಲ್ಡ್ ದೃಶ್ಯಗಳಲ್ಲಿ ಅವರು ನಟಿಸಿದ್ದಾರೆ. ಈ ವಿಷಯದಲ್ಲಿ ಅವರು ಹಿಂಜರಿಯುವುದಿಲ್ಲ. ಆದಾಗ್ಯೂ, ಒಂದು ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಚಿತ್ರೀಕರಣದ ಸಮಯದಲ್ಲಿ ತಮ್ಮೊಂದಿಗಿದ್ದ ನಟ ನಡೆದುಕೊಂಡ ರೀತಿ ಭಾರೀ ಹಿಂಸೆ ನೀಡಿತ್ತು ಎಂದು ಹೇಳಿದ್ದಾರೆ.
"ಆ ದೃಶ್ಯ ಚಿತ್ರೀಕರಿಸುವ ವೇಳೆ ನನ್ನ ಸಹ ನಟ ಉದ್ದೇಶಪೂರ್ವಕವಾಗಿ ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರು. ಅದಂತೂ ಸತ್ಯ. ಕಿಸ್ಸಿಂಗ್ ಸೀನ್ಗೆ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಆ ಸಮಯದಲ್ಲಿ ನಾನು ಧರಿಸಿದ್ದ ಉಡುಗೆ ಕೂಡ ನನಗೆ ಫಿಟ್ ಆಗಿ ಕುಳಿತಿರಲಿಲ್ಲ. ಕಿಸ್ಸಿಂಗ್ ಶಾಟ್ ವೇಳೆ ಆತ ಸುಲಭವಾಗಿ ನನ್ನ ಸೊಂಟವನ್ನು ಹಿಡಿದುಕೊಳ್ಳಬಹುದಿತ್ತು. ಇದು ಸ್ಕ್ರಿಪ್ಟ್ನಲ್ಲಿಯೂ ಇತ್ತು. ಆದರೆ, ಆ ಸಮಯದಲ್ಲಿ ಆತ ಸೊಂಟ ಹಿಡಿಯುವ ಬದಲು ನನ್ನ ದೇಹದ ಬೇರೊಂದು ಜಾಗವನ್ನು ಅಸಭ್ಯವಾಗಿ ಮುಟ್ಟಿದ. ಇದರಿಂದ ಮನಸ್ಸಿಗೆ ತುಂಬಾ ಘಾಸಿಯಾಯಿತು. ಆತ ಏಕೆ ಹೀಗೆ ಮಾಡಿದ ಎಂದು ಆ ಕ್ಷಣವೇ ನಾನು ಕೇಳಬಹುದಿತ್ತು. ಆದರೆ, ನಾನು ಕೇಳಲಿಲ್ಲ. ಕಾರಣ, ಅದು ಮಿಸ್ ಆಗಿ ಆಯ್ತು ಎಂದು ಹೇಳಿ, ಆತ ಅಲ್ಲಿಂದ ಹೋಗುತ್ತಿದ್ದ ಎಂಬುದು ನನಗೆ ಚೆನ್ನಾಗಿ ತಿಳಿದಿತ್ತು" ಎಂದಿದ್ದಾರೆ.
"ಇದೊಂದು ಕಾರಣಕ್ಕಾಗಿಯೇ ನಾನು ಹೆಚ್ಚು ಮಾತನಾಡಲಿಲ್ಲ. ಆ ವಿಷಯವನ್ನು ಮುನ್ನೆಲೆಗೆ ತರಲಿಲ್ಲ. ಆದರೆ, ಖುದ್ದಾಗಿ ಆತನಿಗೆ ಮುಂದಿನ ಟೇಕ್ನಲ್ಲಿ ಹೀಗೆ ಮಾಡಬೇಡಿ ಎಂದು ಎಚ್ಚರಿಸಿದೆ" ಎಂದು ನಟನ ಹೆಸರೇಳದೆ ಘಟನೆ ವಿವರಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ, 'ಅರ್ಜುನ್ ರೆಡ್ಡಿ' ನಟಿ ಶಾಲಿನಿ ಪಾಂಡೆ ಕೂಡ ಇದೇ ರೀತಿಯ ಘಟನೆಯೊಂದನ್ನು ಬಹಿರಂಗಪಡಿಸಿದರು. "ಸಿನಿಮಾದ ಶೂಟಿಂಗ್ ವೇಳೆ ಕ್ಯಾರವಾನ್ನಲ್ಲಿ ತಾವು ಬಟ್ಟೆ ಬದಲಾಯಿಸುವ ಸಮಯದಲ್ಲಿ ಓರ್ವ ನಿರ್ದೇಶಕ ಏಕಾಏಕಿ ಒಳಗೆ ಬಂದರು. ಅನುಮತಿಯಿಲ್ಲದೆ ಒಳಗೆ ಬಂದಿದ್ದಕ್ಕಾಗಿ ಅವರ ಮೇಲೆ ತೀವ್ರ ಕೋಪಗೊಂಡು ಕೂಗಾಡಿದ್ದೆ" ಎಂದು ಶಾಲಿನಿ ಹೇಳಿದ್ದರು. ನಟಿಯ ಈ ಹೇಳಿಕೆ ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿತು,(ಏಜೆನ್ಸೀಸ್).