ವಿಶ್ವದಾಖಲೆ ಬರೆದ 'ರಾಮಾಯಣ' ಸೀರಿಯಲ್​: ವೀಕ್ಷಕರ ಸಂಖ್ಯೆ, ಸಮಯದಲ್ಲೂ ಹೆಚ್ಚಳ

ramayana
Published on

ಬೆಂಗಳೂರು: ಕರೊನಾ ಲಾಕ್​ಡೌನ್​ ವೇಳೆ ದೂರದರ್ಶನದಲ್ಲಿ ರೇಟಿಂಗ್ಸ್ ಧೂಳೆಬ್ಬಿಸಿ ಹೊಸ ದಾಖಲೆಯನ್ನೇ ನಿರ್ಮಿಸಿದ್ದು ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು. 33 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಈ ಧಾರಾವಾಹಿಗಳು ಮರು ಪ್ರಸಾರ ಆಗುತ್ತಿದ್ದಂತೆ ಮನೆಮಂದಿಯೆಲ್ಲರ ನೆಚ್ಚಿನ ಸೀರಿಯಲ್​ ಆಗಿಬಿಟ್ಟಿದ್ದವು. ಅಷ್ಟೇ ಅಲ್ಲ, ಕಳೆದ ವರ್ಷ ದೂರದರ್ಶನ ಬಳಕೆಗೆ ಅತಿದೊಡ್ಡ ಉತ್ತೇಜನವೂ ಸಿಕ್ಕಿದೆ.

ರಾಮಾಯಣ ಮತ್ತು ಮಹಾಭಾರತದ ಮರು ಪ್ರಸಾರವು ಹೊಸ ದಾಖಲೆ ಬರೆದಿದ್ದು, ರಾಮಾಯಣ ಸೀರಿಯಲ್​ ವಿಶ್ವದಲ್ಲೇ ಅತಿಹೆಚ್ಚು ವೀಕ್ಷಣೆ ಕಂಡ ಕಾರ್ಯಕ್ರಮ ಎಂದು ಬಾರ್ಕ್ ಸಿಇಒ ಸುನಿಲ್ ಲುಲ್ಲಾ ಹೇಳಿದ್ದಾರೆ. 2019ರಲ್ಲಿ 3 ಗಂಟೆ 42 ನಿಮಿಷಗಳಿಂದ 2020ರಲ್ಲಿ ಪ್ರತಿ ವೀಕ್ಷಕರು ಕಳೆಯುವ ಸರಾಸರಿ ಸಮಯ 4 ಗಂಟೆ 2 ನಿಮಿಷಗಳಿಗೆ ಏರಿದೆ ಎಂದು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ತಿಳಿಸಿದೆ. ಲಾಕ್​ಡೌನ್ ಜಾರಿಯಾಗಿದ್ದರಿಂದ ಜನರು ಅನಿವಾರ್ಯವಾಗಿ ಮನೆಯಲ್ಲೇ ಉಳಿದರು. ಆ ವೇಳೆ ಟಿವಿಯತ್ತ ವಾಲಿದ್ದರಿಂದ ವೀಕ್ಷಕರ ಸಂಖ್ಯೆಯೂ ಹೆಚ್ಚಾಯ್ತು. 2020ರಲ್ಲಿ ಕೋವಿಡ್​ ಹಿನ್ನೆಲೆಯಲ್ಲಿ ಭಾರತೀಯರ ದೂರದರ್ಶನ ಬಳಕೆ ಶೇ.9ರಿಂದ 999 ಶತಕೋಟಿಯ ವೀಕ್ಷಣಾ ನಿಮಿಷಗಳಿಗೆ ಏರಿದೆ ಎಂದು ರೇಟಿಂಗ್ ಸಂಸ್ಥೆ ಬಾರ್ಕ್​ ಹೇಳಿದೆ.

ಪೌರಾಣಿಕ ಧಾರಾವಾಹಿಗಳ ಪ್ರಸಾರವು ದೂರದರ್ಶನಕ್ಕೆ ಸಾಕಷ್ಟು ಜಾಹೀರಾತುದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಮಾರ್ಚ್‌ನಲ್ಲಿ ಟಿವಿ ವೀಕ್ಷಣೆಯ ಉತ್ತುಂಗಕ್ಕೇರಿದೆ.

ಟಿವಿ ವೀಕ್ಷಣೆಯ ಅತಿದೊಡ್ಡ ವಿಭಾಗವಾದ ಮನರಂಜನಾ ಚಾನೆಲ್‌ (ಜಿಇಸಿ) ನಿಮಿಷಗಳ ವೀಕ್ಷಣೆಯ ಮೂಲಕ ಶೇ.9 ಗಳಿಕೆ ಕಂಡಿದೆ. ಚಲನಚಿತ್ರ ವೀಕ್ಷಣೆಯು ಶೇ.10 ಹೆಚ್ಚಾಗಿದೆ. ಮಕ್ಕಳ ವೀಕ್ಷಣೆ ಶೇ.27 ಹೆಚ್ಚಾಗಿದೆ. ಸಂಗೀತ ಶೇ.11 ಹಾಗೂ ಕ್ರೀಡೆ ಶೇ.35 ಕುಸಿತ ಕಂಡಿದೆ ಎಂದು ವರದಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net