ಪದ್ಮಪ್ರಶಸ್ತಿಯ ಮಾದರಿ ರಾಜ್ಯೋತ್ಸವ ಪುರಸ್ಕಾರ

Rajyothsava
Published on

ಬೆಂಗಳೂರು: ಕರ್ನಾಟಕದ ಅತ್ಯುನ್ನತ ನಾಗರಿಕ ಗೌರವವಾದ ರಾಜ್ಯೋತ್ಸವ ಪ್ರಶಸ್ತಿಯನ್ನು, ಪದ್ಮಪ್ರಶಸ್ತಿಗಳ ಮಾದರಿಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಆಯ್ಕೆ ಮಾಡುವ ಮಹತ್ವದ ತೀರ್ವನವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್​ಕುಮಾರ್ ಮಾಡಿದ್ದಾರೆ. ಪ್ರತಿ ವರ್ಷ ನ.1ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅದಕ್ಕಾಗಿ ಅಕ್ಟೋಬರ್ ಮೊದಲ ವಾರದಿಂದಲೇ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಕರ್ನಾಟಕ ಏಕೀಕರಣವಾದ ವರ್ಷದಷ್ಟೇ ಸಂಖ್ಯೆಯ ಪ್ರಶಸ್ತಿಗಳನ್ನು ನೀಡಬೇಕಿದ್ದು, ಈ ವರ್ಷ 66 ಜನರನ್ನು ಗೌರವಿಸಲಾಗುತ್ತದೆ. ಮಾರ್ಗಸೂಚಿಯಲ್ಲಿರುವಂತೆಯೇ ಆಯ್ಕೆ ಸಮಿತಿಯು ಸಾಧಕರನ್ನು ಆಯ್ಕೆ ಮಾಡುತ್ತಾರಾದರೂ ರಾಜ್ಯದ ಮೂಲೆಮೂಲೆಯಲ್ಲಿರುವ ಸಾಧಕರನ್ನು ಸರ್ಕಾರದ ಗಮನಕ್ಕೆ ತರುವ ಹೊಸ ಪ್ರಯತ್ನಕ್ಕೆ ಸಚಿವರು ನಾಂದಿ ಹಾಡಿದ್ದಾರೆ.

‘ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಗುರುತಿಸಿ ಆನ್​ಲೈನ್ ಮೂಲಕ ಅವರ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೇ ಅವಕಾಶ ಕಲ್ಪಿಸಲಾಗಿದೆ. 66 ಅರ್ಹ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಯಾರೇ ಸಾರ್ವಜನಿಕರು ಮೂವರು ಸಾಧಕರನ್ನು ಸರ್ಕಾರದ ಗಮನಕ್ಕೆ ತರಬೇಕು’ ಎಂದು ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ಸೇವಾಸಿಂಧು ಪೋರ್ಟಲ್: ಎಲೆಮರೆ ಕಾಯಿಯಂತಿರುವ ಮೂವರು ಸಾಧಕರನ್ನು ಸೇವಾಸಿಂಧು ಪೋರ್ಟಲ್ ಮೂಲಕ ಸಾರ್ವಜನಿಕರು ಪರಿಚಯಿಸಬಹುದು. ಇದಕ್ಕೆಂದೇ ಪೋರ್ಟಲ್​ನಲ್ಲಿ ವಿಶೇಷ ನಮೂನೆ ಅರ್ಜಿಯನ್ನು ರೂಪಿಸಲಾಗಿದ್ದು, ಅದರಲ್ಲಿ ಸಾಧಕರ ಹೆಸರು, ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಊರು, ವಿಳಾಸ, ಸಂಪರ್ಕ ಸಂಖ್ಯೆ ಮುಂತಾದ ವಿವರಗಳನ್ನು ಅವಕಾಶ ನೀಡಲಾಗುತ್ತದೆ. ಎಲ್ಲ ಸಲಹೆಗಳನ್ನೂ ತಜ್ಞರ ಸಮಿತಿಗೆ ನೀಡಲಾಗುತ್ತದೆ. ಸಮಿತಿಯು ಅರ್ಹರನ್ನು ಗುರುತಿಸಿ ಪರಿಗಣಿಸಿದರೆ ಅವರಿಗೇ ಪ್ರಶಸ್ತಿ ನೀಡಲಾಗುತ್ತದೆ. ಎಂದಿನಂತೆ ರಾಜ್ಯೋತ್ಸವ ಪ್ರಶಸ್ತಿಗೆ ಇರುವ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕ್ರೀಡೆಯನ್ನು ಹೊರತುಪಡಿಸಿ ಎಲ್ಲ ಕ್ಷೇತ್ರಗಳ ಸಾಧಕರೂ ಕನಿಷ್ಟ 60 ವರ್ಷ ಮೇಲ್ಪಟ್ಟವರಾಗಿರಬೇಕು. ಅ.15ರೊಳಗೆ ಹೆಸರುಗಳನ್ನು ಸೂಚಿಸಲು ಅವಕಾಶವಿರಲಿದೆ.

ರಾಜ್ಯದ ಮೂಲೆಮೂಲೆಯಲ್ಲಿ ವಾಸಮಾಡುತ್ತಿರುವ ಹಾಗೂ ಎಲೆಮರೆ ಕಾಯಿಯಂತೆ ತಂತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ, ಮಾಡುತ್ತಿರುವ ವ್ಯಕ್ತಿಗಳನ್ನು ಅವರ ಸುತ್ತಮುತ್ತಲೂ ಇರುವವರನ್ನು ಗುರುತಿಸಲು ಇದೊಂದು ಅವಕಾಶ. ಪ್ರಶಸ್ತಿ ಆಯ್ಕೆಯಲ್ಲಿ ಸಾರ್ವಜನಿಕರೇ ನೇರವಾಗಿ ಭಾಗಿಯಾದಂತಾಗುತ್ತದೆ.

| ವಿ. ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net