

Rajinikanth Coolie: ತಮಿಳು ಚಿತ್ರರಂಗದ ಸೂಪರ್ಸ್ಟಾರ್, ಅಭಿಮಾನಿಗಳ ‘ತಲೈವಾ’, ನಟ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೂಲಿ’ ಇದೇ ಆಗಸ್ಟ್ 14ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ‘ಕೂಲಿ’ ಕ್ರೇಜ್ ಶುರುವಾಗಿದ್ದು, ಮುಂಗಡ ಬುಕ್ಕಿಂಗ್ಗಳ ಸಂಖ್ಯೆ ಭರ್ಜರಿಯಾಗಿವೆ. ಬಿಡುಗಡೆಗೂ ಮುನ್ನವೇ ಸಖತ್ ಸದ್ದು ಮಾಡುತ್ತಿರುವ ರಜಿನಿ ಚಿತ್ರತಂಡ ಇತ್ತೀಚೆಗಷ್ಟೇ ನಡೆದ ಅದ್ಧೂರಿ ಪ್ರೀ-ರಿಲೀಸ್ ಈವೆಂಟ್ನಲ್ಲಿ ಭಾಗವಹಿಸಿ, ಹಲವು ವಿಚಾರಗಳನ್ನು ಹಂಚಿಕೊಂಡಿತು.
ವೇದಿಕೆಯಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ತಲೈವಾ, 'ಕೂಲಿ'ಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ಅಮಿರ್ ಖಾನ್ರನ್ನು ಗುಣಗಾನ ಮಾಡಿದರು. "ನಮ್ಮ ನಿರ್ದೇಶಕ ಲೋಕೇಶ್ ಕನಕರಾಜ್ ಅವರು, ಅಮೀರ್ ಖಾನ್ಗೆ ಅತಿಥಿ ಪಾತ್ರ ನೀಡುವ ಬಗ್ಗೆ ನನಗೆ ಹೇಳಿದ್ದರು. ಅಮೀರ್ ಒಬ್ಬ ಪರ್ಫೆಕ್ಷನಿಸ್ಟ್. ನಮ್ಮಲ್ಲಿ (ತಮಿಳುನಾಡು) ಕಮಲ್ ಹಾಸನ್ ಹೇಗೋ, ಉತ್ತರ ಭಾರತದಲ್ಲಿ ಅವರು ಹಾಗೆ" ಎಂದರು.
"ಬಾಲಿವುಡ್ನ ಮೂವರು ಖಾನ್ಗಳಲ್ಲಿ ಅಮಿರ್ ಅವರೇ ಅತ್ಯುತ್ತಮ. ಒಂದು ಕಡೆ ಸಲ್ಮಾನ್ ಖಾನ್ ಇದ್ದರೆ, ಮತ್ತೊಂದೆಡೆ ಶಾರುಖ್ ಖಾನ್ ಇದ್ದಾರೆ. ಇವರ ಪೈಕಿ ಆಮಿರ್ ಖಾನ್ ನನಗೆ ಎತ್ತರದಲ್ಲಿದ್ದಾರೆ. ನೀವೊಬ್ಬರು ಲೆಜೆಂಡ್, ಸೆಲ್ಯೂಟ್ ನಿಮಗೆ" ಎಂದು ರಜಿನಿಕಾಂತ್ ಹೇಳಿದರು. ವರದಿಗಳ ಪ್ರಕಾರ, ಆಮಿರ್ ಖಾನ್ ಕಥೆಯ ನಿರೂಪಣೆಯನ್ನು ಕೇಳದೆ ಈ ಚಿತ್ರಕ್ಕೆ ಸಹಿ ಹಾಕಿದರು ಎಂಬ ಸಂಗತಿಯನ್ನು ನಿರ್ದೇಶಕರು ಬಹಿರಂಗಪಡಿಸಿದ್ದಾರೆ.
ಲೋಕೇಶ್ ನಿರ್ದೇಶನದ ಈ ಚಿತ್ರದಲ್ಲಿ ರಜಿನಿಕಾಂತ್, ನಾಗಾರ್ಜುನ, ಕನ್ನಡದ ನಟ ಉಪೇಂದ್ರ, ಬಾಲಿವುಡ್ ಹೀರೋ ಆಮಿರ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶ್ರುತಿ ಹಾಸನ್, ಪೂಜಾ ಹೆಗ್ಡೆ (ವಿಶೇಷ ಹಾಡು) ಸೌಬಿನ್ ಶಾಹಿರ್, ರೇಬಾ ಮೋನಿಕಾ ಜಾನ್, ಸತ್ಯರಾಜ್, ರಚಿತಾ ರಾಮ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಆಗಸ್ಟ್ 14ರಂದು ಜಾಗತಿಕವಾಗಿ ರಿಲೀಸ್ ಆಗಲಿದೆ.
ಆ.14ರಂದು ತಮಿಳಿನ ಕೂಲಿ ಪ್ಯಾನ್ ಇಂಡಿಯಾ ರಿಲೀಸ್ ಕಂಡರೆ, ಅದೇ ದಿನದಂದು ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ತೆಲುಗು ನಟ ಜೂನಿಯರ್ ಎನ್ಟಿಆರ್ ಅಭಿನಯದ ಬಹುನಿರೀಕ್ಷಿತ 'ವಾರ್ 2' ತೆರೆ ಕಾಣುತ್ತಿದೆ. ಎರಡು ಕೂಡ ಸಖತ್ ಸದ್ದು ಮಾಡಿದ್ದು, ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪೈಪೋಟಿಗಿಳಿಯಲಿದೆ. ಈ ಎರಡರ ಪೈಕಿ ಯಾವ ಸಿನಿಮಾ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).