ಕ್ರಿಕೆಟ್‌ ಇತಿಹಾಸದಲ್ಲಿ ಬೇರೂರಿದ ವಿಶೇಷ ದಾಖಲೆಗಳಿವು! ಯಾರೆಲ್ಲ ಇದ್ದಾರೆ ಈ ಪಟ್ಟಿಯಲ್ಲಿ? ಇಲ್ಲಿದೆ ಮಾಹಿತಿ | Cricket Records

ವಿಜಯವಾಣಿ (60)
Published on

Cricket Records: ಯಾವುದೇ ಕ್ರೀಡೆಯಾದರೂ ಅಲ್ಲೊಂದು ದಾಖಲೆ ಆಗಲೇಬೇಕು. ಅದನ್ನು ಮತ್ತೊಬ್ಬ ಆಟಗಾರ ಮುರಿದು, ತನ್ನದೇ ಹೊಸದೊಂದು ದಾಖಲೆ ನಿರ್ಮಿಸಬೇಕು. ಅದೇ ಆಟದ ಮಜಾ. ಇತ್ತೀಚೆಗೆ, ಜಿಂಬಾಬ್ವೆ ವಿರುದ್ಧದ ಟೆಸ್ಟ್‌ನಲ್ಲಿ ತಮ್ಮ 400 ರನ್ ಗುರಿ​ ತಲುಪುವ ಹಂತದಲ್ಲಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ವಿಯಾನ್ ಮುಲ್ದಾರ್, 367 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿದ್ದಾಗಲೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಈ ಮೂಲಕ ಕ್ರಿಕೆಟ್​ ದಂತಕಥೆ ಬ್ರಿಯಾನ್ ಲಾರ್​ ದಾಖಲೆಯನ್ನು ಮುರಿಯದೆ, ಹಾಗೆಯೇ ಉಳಿಸಿದರು.

ಈ ಬಗ್ಗೆ ಮಾತನಾಡಿದ ಅವರು, ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಮುರಿಯಲು ನನಗಿಷ್ಟವಿರಲಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಲಾರಾ, "ಇದೇ ರೀತಿ ಇನ್ನೊಂದು ಅವಕಾಶ ನಿಮಗೆ ಸಿಕ್ಕರೆ, ಯಾವುದೇ ಕಾರಣಕ್ಕೂ ಮಿಸ್​ ಮಾಡ್ಕೊಬೇಡಿ" ಎಂದಿದ್ದಾರೆ. ಆದಾಗ್ಯೂ, ಲಾರಾ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್‌ ವಿಶ್ವ ದಾಖಲೆ ಹಾಗೆಯೇ ಉಳಿದಿದೆ. ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಮುರಿಯದ ಅಂತಹ ಅಗ್ರ 10 ದಾಖಲೆಗಳನ್ನು ಹೊಂದಿರುವ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

1. ಸರ್ ಜ್ಯಾಕ್ ಹಾಬ್ಸ್

ಇಂಗ್ಲೆಂಡ್ ಬ್ಯಾಟಿಂಗ್ ದಂತಕಥೆ ಸರ್ ಜ್ಯಾಕ್ ಹಾಬ್ಸ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 61,760 ರನ್ ಗಳಿಸಿದ್ದಾರೆ. ಇದರಲ್ಲಿ 199 ಶತಕ ಮತ್ತು 273 ಅರ್ಧಶತಕ ಸೇರಿವೆ. ಸರಾಸರಿ 50.70. 1905 ಮತ್ತು 1935ರ ನಡುವೆ, ಜ್ಯಾಕ್ ಹಾಬ್ಸ್ ಈ ಮಟ್ಟಿಗಿನ ರನ್ ಗಳಿಸಿದ್ದಾರೆ. ಇಂದಿನ ಪೀಳಿಗೆಯ ಯಾವುದೇ ಕ್ರಿಕೆಟಿಗ ಈ ಸಾಧನೆಯನ್ನು ತಲುಪುವುದು ನಿಜಕ್ಕೂ ಕಷ್ಟಸಾಧ್ಯ ಎಂದೇ ಹೇಳಬಹುದು.

2. ಸರ್ ಡಾನ್ ಬ್ರಾಡ್ಮನ್

ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್​ ಸರ್ ಬ್ರಾಡ್ಮನ್ 59 ಟೆಸ್ಟ್‌ಗಳಲ್ಲಿ ಒಟ್ಟು 6996 ರನ್ ಗಳಿಸಿದ್ದಾರೆ. ಈ ಪೈಕಿ 12 ದ್ವಿಶತಕಗಳಿಂದ 5078 ರನ್‌ಗಳನ್ನು ಕಲೆಹಾಕಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ಟೆಸ್ಟ್‌ ಕ್ರಿಕೆಟ್​ನಲ್ಲಿ 99.94ರ ಸರಾಸರಿಯಲ್ಲಿ ರನ್ ಗಳಿಸಿಲ್ಲ ಎಂಬುದು ಗಮನಾರ್ಹ.

3. ಮುತ್ತಯ್ಯ ಮುರಳೀಧರನ್

ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಟೆಸ್ಟ್‌ನಲ್ಲಿ ಒಟ್ಟು 800 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಏಕದಿನಗಳಲ್ಲಿ 534 ಮತ್ತು ಟಿ20ಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟಾರೆಯಾಗಿ, ಅವರ ಅಂತರರಾಷ್ಟ್ರೀಯ ವಿಕೆಟ್‌ಗಳು 1347.

4. ಸಚಿನ್ ತೆಂಡೂಲ್ಕರ್

ಕ್ರಿಕೆಟ್​ ದೇವರು ಎಂದೇ ಕರೆಯಲ್ಪಡುವ 'ಮಾಸ್ಟರ್ ಬ್ಲಾಸ್ಟರ್' ಸಚಿನ್ ತೆಂಡೂಲ್ಕರ್​, ಟೀಮ್ ಇಂಡಿಯಾಗೆ ಅಪಾರ ಮನ್ನಣೆ ತಂದುಕೊಟ್ಟ ಶ್ರೇಷ್ಠ ಕ್ರಿಕೆಟಿಗ. ತಮ್ಮ 22 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 463 ಏಕದಿನ ಪಂದ್ಯಗಳನ್ನು ಸಚಿನ್ ಆಡಿದ್ದಾರೆ. ಇದರಲ್ಲಿ 49 ಶತಕ ಮತ್ತು 96 ಅರ್ಧಶತಕ ಸೇರಿವೆ. ಈ ಮೂಲಕ ಒಟ್ಟು 18,426 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 200. ಈ ವಿಶ್ವ ದಾಖಲೆಯನ್ನು ಮುರಿಯುವುದು ಇಂದಿನ ಅಥವಾ ಮುಂದಿನ ಪೀಳಿಗೆಗೆ ಅಷ್ಟು ಸುಲಭವಲ್ಲ.

5. ರೋಹಿತ್ ಶರ್ಮ

ಭಾರತದ ದಿಗ್ಗಜ ಬ್ಯಾಟರ್​, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಏಕದಿನ ಪಂದ್ಯಗಳಲ್ಲಿ ಒಟ್ಟು ಮೂರು ದ್ವಿಶತಕಗಳನ್ನು ಗಳಿಸಿದ್ದಾರೆ. ಅವರ ಅತಿಹೆಚ್ಚು ಸ್ಕೋರ್ 264. 2014ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ 33 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಾಯದಿಂದ ಈ ಬೃಹತ್ ಸ್ಕೋರ್ ಕಲೆಹಾಕಿದ್ದಾರೆ. ಈ ದಾಖಲೆಯ ಹತ್ತಿರಕ್ಕೆ ಇನ್ನೂ ಯಾರು ಸಮೀಪಿಸಲು ಸಾಧ್ಯವಾಗಿಲ್ಲ.

6. ಜೇಸನ್ ಗಿಲ್ಲೆಸ್ಪಿ

2006ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ, ಆಸ್ಟ್ರೇಲಿಯಾದ ವೇಗಿ ಜೇಸನ್ ಗಿಲ್ಲೆಸ್ಪಿ ನೈಟ್ ವಾಚ್‌ಮ್ಯಾನ್ ಆಗಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದರು. ಆ ಪಂದ್ಯದಲ್ಲಿ ಅವರು 201 ರನ್ ಬಾರಿಸಿದರು. ನೈಟ್ ವಾಚ್‌ಮ್ಯಾನ್ ಆಗಿ ದ್ವಿಶತಕ ಗಳಿಸಿದ ಏಕೈಕ ಆಟಗಾರ ಗಿಲ್ಲೆಸ್ಪಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

7. ಜಿಮ್ ಲೇಕರ್

ಇಂಗ್ಲೆಂಡ್‌ನ ಸ್ಪಿನ್ನರ್ 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್‌ಗಳು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಹತ್ತು ವಿಕೆಟ್‌ಗಳನ್ನು ಕಬಳಿಸಿದರು. ಒಂದೇ ಟೆಸ್ಟ್‌ನಲ್ಲಿ ಯಾವುದೇ ಬೌಲರ್ ಈ ಸಾಧನೆಯನ್ನು ಸಾಧಿಸಿಲ್ಲ ಎಂಬುದು ಗಮನಾರ್ಹ.

8. ಮಿಸ್ಬಾ-ಉಲ್-ಹಕ್

ಪಾಕಿಸ್ತಾನಿ ಫಿನಿಷರ್ ಏಕದಿನ ಪಂದ್ಯಗಳಲ್ಲಿ 5000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಮಿಸ್ಬಾ-ಉಲ್-ಹಕ್ ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ಶತಕ ಗಳಿಸದೆ ಈ ಮೈಲಿಗಲ್ಲು ತಲುಪಿದ ಏಕೈಕ ಕ್ರಿಕೆಟಿಗ.

9. ಕ್ರಿಸ್ ಗೇಲ್

ವೆಸ್ಟ್ ಇಂಡೀಸ್‌ನ ಸ್ಟಾರ್ ಮತ್ತು ಯೂನಿವರ್ಸಲ್​ ಬಾಸ್ ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (ಐಪಿಎಲ್) ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಪರ ಅಜೇಯ ಶತಕ ಗಳಿಸಿದರು. ಸೆಂಚುರಿ ಮುಂದುವರಿಸಿದ ಅವರು ಕೇವಲ 66 ಎಸೆತಗಳಲ್ಲಿ ಬರೋಬ್ಬರಿ 175 ರನ್ ಬಾರಿಸುವ ಮೂಲಕ ಅಜೇಯರಾಗಿ ಉಳಿದರು. ಇದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಮತ್ತು ಅತ್ಯಧಿಕ ಸ್ಕೋರ್ ಆಗಿ ಉಳಿದಿದೆ.

10. ಚಾಮಿಂಡಾ ವಾಸ್

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಎಡಗೈ ಬೌಲರ್ ಚಾಮಿಂಡಾ ವಾಸ್, 2001ರಲ್ಲಿ, ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ಕೇವಲ 19 ರನ್‌ಗಳಿಗೆ ಎಂಟು ವಿಕೆಟ್‌ಗಳನ್ನು ಕಬಳಿಸುವ ಮೂಲಕವ ವಿಶೇಷ ದಾಖಲೆಯನ್ನು ನಿರ್ಮಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net