

ChatGPT: ಇದು ಎಐ ಯುಗ ಎಂದರೆ ಖಂಡಿತ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಬಹುಜನರ ಕೆಲಸಗಳು ಬಹಳ ಸರಳವಾಗಿ ಹಾಗೂ ಸುಲಭವಾಗಿ ನಡೆಯುತ್ತಿರುವುದು ಕೃತಕ ಬುದ್ಧಿಮತ್ತೆ ಸಹಾಯದಿಂದಲೇ. ಆರು ಇಂಚಿನ ಸ್ಮಾರ್ಟ್ಫೋನ್ನಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಎಐ ನಿರ್ಮಿತ ಚಾಟ್ಜಿಪಿಟಿ ಬಳಿ ಕೇಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೇಕರು ತಮ್ಮ ದೇಹದ ತೂಕಕ್ಕೆ ತಕ್ಕಂತೆ ಡಯಟ್ ಪ್ಲ್ಯಾನ್ನಿಂದ ಹಿಡಿದು ಒಂದಷ್ಟು ಗೊಂದಲಗಳ ಬಗ್ಗೆಯೂ ಪ್ರಶ್ನಿಸುತ್ತಾರೆ. ಇವುಗಳಲ್ಲಿ ಒಂದಷ್ಟು ಮಾಹಿತಿ ಸರಿಯಿದ್ದರೆ, ಮತ್ತೊಂದಷ್ಟು ಎಡವಟ್ಟಿಗೆ ಕಾರಣವಾಗುತ್ತದೆ. ಇಲ್ಲೊಂದು ಕೇಸ್ ಕೂಡ ಅದಕ್ಕೆ ಸೇರಿದೆ.
ಅಷ್ಟಕ್ಕೂ ಈತ ಮಾಡಿದ ತಪ್ಪು, ಚಾಟ್ಜಿಪಿಟಿ ಕೊಟ್ಟ ಮಾಹಿತಿಯನ್ನು ಕುರುಡಾಗಿ ನಂಬಿದ್ದು ಮತ್ತು ಅದನ್ನು ಪಾಲಿಸಿದ್ದು. ತನ್ನ ಆಹಾರದಲ್ಲಿ ಕ್ಲೋರೈಡ್ ಅಂಶದ ಬದಲಿಗೆ ಸೋಡಿಯಂ ಬ್ರೋಮೈಡ್ ಬದಲಿಸಲು ಚಾಟ್ಜಿಪಿಟಿ ಸಲಹೆ ಕೊಟ್ಟಿದ್ದೇ ತಡ, ಅದನ್ನು ವೈದ್ಯರೊಂದಿಗೆ ಚರ್ಚಿಸದೆ, ಬರೋಬ್ಬರಿ ಮೂರು ತಿಂಗಳ ಕಾಲ ಸೇವಿಸಿದ್ದಾನೆ. ಅಸಲಿಗೆ, ಬ್ರೋಮೈಡ್ ಸೇವನೆ ಮನುಷ್ಯನ ದೇಹಕ್ಕೆ ಅಪಾಯದ ಮುನ್ಸೂಚನೆ.
ವಾಷಿಂಗ್ಟನ್ ವಿಶ್ವವಿದ್ಯಾಲಯದ ವೈದ್ಯರು, "ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್: ಕ್ಲಿನಿಕಲ್ ಕೇಸಸ್" ಎಂಬ ವೈದ್ಯಕೀಯ ಜರ್ನಲ್ನಲ್ಲಿ ಬಹಿರಂಗಪಡಿಸಿದ ವಿವರಗಳ ಪ್ರಕಾರ, ಆ ವ್ಯಕ್ತಿ ಮೂರು ತಿಂಗಳ ಕಾಲ ತನ್ನ ಆಹಾರದಲ್ಲಿ ಕ್ಲೋರೈಡ್ ಬದಲಿಗೆ ಸೋಡಿಯಂ ಬ್ರೋಮೈಡ್ ಅನ್ನು ತೆಗೆದುಕೊಂಡಿದ್ದಾನೆ. ಹೀಗೆ ಮಾಡಲು ಚಾಟ್ಜಿಪಿಟಿ ಹೇಳಿತು ಎಂದು ಹೇಳಿದ್ದಾನೆ.
ಬ್ರೋಮೈಡ್ ಒಮ್ಮೆ ಆತಂಕ ಮತ್ತು ನಿದ್ರಾಹೀನತೆ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿತ್ತು. ಆದರೆ, ಅದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಕಂಡುಬಂದ ಬೆನ್ನಲ್ಲೇ ದಶಕಗಳ ಹಿಂದೆಯೇ ಅದನ್ನು ಚಿಕಿತ್ಸೆಯಿಂದ ಕೈಬಿಡಲಾಯಿತು. ಆದರೀಗ, ಬ್ರೋಮೈಡ್ ಅನ್ನು ಪಶುವೈದ್ಯಕೀಯ ಔಷಧಗಳು ಮತ್ತು ಕೆಲವು ಕೈಗಾರಿಕಾ ಉತ್ಪನ್ನಗಳಲ್ಲಿ ಮಾತ್ರವೇ ಬಳಸಲಾಗುತ್ತಿದೆ.
ಆ ವ್ಯಕ್ತಿ ಬ್ರೋಮೈಡ್ ಸೇವಿಸಿದ ಬಳಿಕ ಅವನ ಆರೋಗ್ಯ ಸ್ಥಿತಿ ತೀರ ಹದಗೆಟ್ಟು, ಸಂಪೂರ್ಣ ಮಾನಸಿಕ ಸಮಸ್ಯೆಯಾಗಿ ಮಾರ್ಪಟ್ಟಿತು. ಅಪಾಯದಿಂದ ಆತನನ್ನು ವೈದ್ಯರು ಚಿಕಿತ್ಸೆ ಮೂಲಕ ಗುಣಪಡಿಸಿದ್ದಾರೆ. ಒಂದೆರೆಡು ವಾರಗಳ ಚೇತರಿಕೆ ನಂತರ ಹೀಗೆ ಮಾಡಿಕೊಂಡಿದ್ದೇಕೆ? ಯಾರು ನಿಮಗೆ ಸಲಹೆ ಕೊಟ್ಟರು ಎಂದು ವೈದ್ಯರು ಕೇಳಿದಾಗಲೇ ಆತ ಚಾಟ್ಜಿಪಿಟಿ ಸಲಹೆ ಬಗ್ಗೆ ಮೌನ ಮುರಿದಿದ್ದಾನೆ. ತನ್ನ ಆಹಾರ ತುಂಬಾ ಉಪ್ಪಿನಿಂದ ಕೂಡಿರುತ್ತದೆ. ಅದಕ್ಕೆ ಪರ್ಯಾಯವಾಗಿ ಏನು ಬಳಸಲಿ ಎಂದು ಚಾಟ್ಜಿಪಿಟಿಯನ್ನು ಕೇಳಿದೆ. ಇದಕ್ಕೆ ಅದು ಕ್ಲೋರೈಡ್ ಬದಲಿಗೆ ಬ್ರೋಮೈಡ್ ಬಳಸುವುದು ಸುರಕ್ಷಿತ ಎಂದು ಹೇಳಿತು. ಅಂತೆಯೇ ನಾನು ಸೇವಿಸಿದೆ ಎಂದು ಹೇಳಿದ್ದಾನೆ,(ಏಜೆನ್ಸೀಸ್).