2 ಚಿತ್ರ ಹಿಟ್ ಆದ್ರೆ ಸಾಕು! ಮೊಬೈಲ್​ ಹಿಡಿಯಲೊಬ್ಬರು, ಖಾಸಗಿ ಜೆಟ್​ ಕೇಳ್ತಾರೆ... 'ಕೂಲಿ' ನಿರ್ಮಾಪಕರ ಬಿಚ್ಚುನುಡಿ​ | Coolie

ವಿಜಯವಾಣಿ (57)
Published on

Rajinikanth Coolie: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್, ಅಭಿಮಾನಿಗಳ 'ತಲೈವಾ', ನಟ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೂಲಿ' ಇದೇ ಆಗಸ್ಟ್ 14ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ 'ಕೂಲಿ' ಕ್ರೇಜ್​ ಶುರುವಾಗಿದ್ದು, ಮುಂಗಡ ಬುಕ್ಕಿಂಗ್​ಗಳ ಸಂಖ್ಯೆ ಭರ್ಜರಿಯಾಗಿವೆ. ಬಿಡುಗಡೆಗೂ ಮುನ್ನವೇ ಸಖತ್ ಸದ್ದು ಮಾಡುತ್ತಿರುವ ರಜಿನಿ ಚಿತ್ರತಂಡ ಇತ್ತೀಚೆಗಷ್ಟೇ ಪ್ರೀ-ರಿಲೀಸ್ ಈವೆಂಟ್​ನಲ್ಲಿ ಭಾಗವಹಿಸಿತು.

ಈ ಸಂದರ್ಭದಲ್ಲಿ, ಸೂಪರ್​ಸ್ಟಾರ್​ ರಜಿನಿಕಾಂತ್​ರನ್ನು ವೇದಿಕೆ ಮೇಲೆ ಹೊಗಳಿ ಮಾತನಾಡಿದ ನಿರ್ಮಾಪಕ ಕಲಾನಿಧಿ ಮಾರನ್, "ಭಾರತೀಯ ಚಿತ್ರರಂಗದ ಏಕೈಕ ಸೂಪರ್‌ಸ್ಟಾರ್ ಅದು ತಲೈವಾ. ಅವರಿಗೆ ಅವರೇ ಸಾಟಿ. ನಾಗಾರ್ಜುನ ಸರ್ ಮಾತಾಡುವಾಗ, ರಜಿನಿ ಅವರು ಬಹಳ ಸರಳ ನಟ ಎಂದರು. ಇದಕ್ಕೆ ನಾನೊಂದಿಷ್ಟು ಸೇರಿಸುವುದಾದರೆ, ಅವರು ಕೇವಲ ಒಬ್ಬ ಸೂಪರ್​ಸ್ಟಾರ್​ ಅಲ್ಲ. ಭಾರತೀಯ ಚಿತ್ರರಂಗದ ಏಕೈಕ ಸೂಪರ್‌ಸ್ಟಾರ್" ಎಂದು ಗುಣಗಾನ ಮಾಡಿದರು.

ಇತರರಿಗೆ ಮುಖಕ್ಕೆ ಹೊಡೆದಂತೆ ಹೇಳಿಕೆ!

"ಕೆಲ ಹೀರೋಗಳು, ಕೇವಲ 2 ಸಿನಿಮಾ ಹಿಟ್‌ ಆದರೆ ಸಾಕು. ತಮ್ಮ ಫೋನ್​ ಹಿಡಿಯಲು ಇಬ್ಬರು, ತಮ್ಮ ಬ್ಯಾಗ್‌ಗಳನ್ನು ಹೊತ್ಕೊಂಡು ಬರಲು ಮೂವರನ್ನು ನೇಮಕ ಮಾಡಿಕೊಳ್ಳುತ್ತಾರೆ. ಇದರೊಟ್ಟಿಗೆ ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಸಲು ನಿರಾಕರಿಸುತ್ತಾರೆ. ಅವರಿಗೆಲ್ಲ ಖಾಸಗಿ ಜೆಟ್‌ಗಳೇ ಬೇಕು. ಆದರೆ, ರಜಿನಿಕಾಂತ್​ ಸರ್ ಪ್ರಯಾಣಿಸುವುದರ ಬಗ್ಗೆ ನಿಮಗೆ ಗೊತ್ತಾ? ಎಂದಾದರೂ ನೋಡಿದ್ದೀರಾ? ಅವರು ಒಂದೇ ಬ್ಯಾಗ್‌ನೊಂದಿಗೆ ಏಕಾಂಗಿಯಾಗಿ ಓಡಾಡುತ್ತಾರೆ ಮತ್ತು ಯಾವುದೇ ಹಮ್ಮು-ಬಿಮ್ಮು ಇಲ್ಲದೆ, ಎಲ್ಲರೊಂದಿಗೆ ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ" ಎಂದರು.

"ಇಷ್ಟೇ ಅಲ್ಲ, ಭಾರತದ ಯಾವುದೇ ಮುಖ್ಯಮಂತ್ರಿ 'ತಲೈವಾ' ಅವರ ದೂರವಾಣಿ ಕರೆಯನ್ನು ಸ್ವೀಕರಿಸುತ್ತಾರೆ. ಸಿಎಂಗಳು ಮಾತ್ರವಲ್ಲ, ಪ್ರಧಾನಿ ಕೂಡ ಅವರ ಕರೆಗೆ ಆದ್ಯತೆ ಕೊಡುತ್ತಾರೆ. ನಮ್ಮ ರಾಷ್ಟ್ರಗಳು ಮಾತ್ರವಲ್ಲ, ಇತರ ದೇಶಗಳ ಪ್ರಧಾನಿಗಳು ಸಹ ಅವರ ಮನೆಗೆ ಭೇಟಿ ನೀಡಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಕಳೆದ 50 ವರ್ಷಗಳಲ್ಲಿ, ಅನೇಕ ಸ್ಟಾರ್​ಗಳು ಬಂದು ಹೋಗಿದ್ದಾರೆ. ಆದರೆ, ಇಂದಿಗೂ ನಂಬರ್ 1 ಆಗಿ ಉಳಿದಿರುವ ಏಕೈಕ ವ್ಯಕ್ತಿ ಅಂದರೆ ಅದು ರಜನಿಕಾಂತ್ ಸರ್"​ ಎಂದು ಹೇಳಿದ್ದಾರೆ.

'ಕೂಲಿ' ತಾರಾ ಬಳಗ

ಲೋಕೇಶ್ ನಿರ್ದೇಶನದ ಈ ಚಿತ್ರದಲ್ಲಿ ರಜಿನಿಕಾಂತ್, ನಾಗಾರ್ಜುನ, ಕನ್ನಡದ ನಟ ಉಪೇಂದ್ರ, ಬಾಲಿವುಡ್​ ಹೀರೋ ಆಮಿರ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶ್ರುತಿ ಹಾಸನ್, ಪೂಜಾ ಹೆಗ್ಡೆ (ವಿಶೇಷ ಹಾಡು) ಸೌಬಿನ್ ಶಾಹಿರ್, ರೇಬಾ ಮೋನಿಕಾ ಜಾನ್, ಸತ್ಯರಾಜ್, ರಚಿತಾ ರಾಮ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಆಗಸ್ಟ್ 14ರಂದು ಜಾಗತಿಕವಾಗಿ ರಿಲೀಸ್ ಆಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net