

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಆಗುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ರಜನಿಕಾಂತ್ ಅವರಿಗೆ ಏಕ ವ್ಯಕ್ತಿ ಆಯೋಗವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಯಾವ ವಿಚಾರಕ್ಕಾಗಿ ಈ ವಿಚಾರಣೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
2018ರಲ್ಲಿ ತೂತುಕುಡಿ ಸ್ಟೆರ್ಲೈಟ್ ಕಾರ್ಖಾನೆಯಲ್ಲಿ ಹಿಂಸಾಚಾರ ನಡೆದಿತ್ತು. ವೇದಾಂತದ ಸ್ಟರ್ಲೈಟ್ ತಾಮ್ರ ಕರಗಿಸುವ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು. ಘಟನೆಯಲ್ಲಿ ಹದಿಮೂರು ಜನರು ಸಾವನ್ನಪ್ಪಿದ್ದರು. ಆ ಸಮಯದಲ್ಲಿ ಸ್ಥಳಕ್ಕೆ ಬಂದಿದ್ದ ರಜನಿಕಾಂತ್, ಈ ಹೋರಾಟದಲ್ಲಿ ಸಮಾಜ ವಿರೋಧಿ ಶಕ್ತಿಗಳು ಪ್ರತಿಭಟನೆಯೊಳಗೆ ಸೇರಿಕೊಂಡಿದ್ದಾರೆ ಎಂದು ಹೇಳಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ತೂತುಕುಡಿ ಪೊಲೀಸ್ ಫೈರಿಂಗ್ ಘಟನೆ ಬಗ್ಗೆ ಏಕ ವ್ಯಕ್ತಿ ಆಯೋಗವು ವಿಚಾರಣೆ ನಡೆಸುತ್ತಿದೆ. ಅದೇ ಹಿನ್ನೆಲೆಯಲ್ಲಿ ಈ ವಿವಾದಾತ್ಮಕ ಹೇಳಿಕೆಯ ಬಗ್ಗೆ ವಿಚಾರಣೆಗೆ ಸಹಕರಿಸಲು ಫೆಬ್ರವರಿಯಲ್ಲೇ ರಜನಿಕಾಂತ್ ಅವರಿಗೆ ಸಮನ್ಸ್ ನೀಡಲಾಗಿತ್ತು. ತುತುಕೂಡಿಗೆ ಬಂದರೆ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗಬಹುದು ಎಂದು ಹೇಳುವ ಮೂಲಕ ರಜನಿಕಾಂತ್ ವಿನಾಯಿತಿ ಬಯಸಿದ್ದರು. ಇದೀಗ ಜನವರಿ 19ರಂದು ವಿಚಾರಣೆಗೆ ಹಾಜರಾಗುವಂತೆ ಆಯೋಗವು ಎರಡನೇ ಬಾರಿಗೆ ಸಮನ್ಸ್ ನೀಡಿದೆ. ನಿವೃತ್ತ ನ್ಯಾಯಾಧೀಶ ಅರುಣಾ ಜಗದೀಶನ್ ನೇತೃತ್ವದ ಆಯೋಗವು ರಿಜಿಸ್ಟರ್ ಪೋಸ್ಟ್ ಮೂಲಕ ಸಮನ್ಸ್ ಕಳುಹಿಸಿದೆ. (ಏಜೆನ್ಸೀಸ್)