ಗರ್ಲ್​ಫ್ರೆಂಡ್​ ಮನೆಯಿಂದ ಕಾಲ್ಕಿತ್ತವ ಪಾಕಿಸ್ತಾನ ಸೇರಿದ! ಮಗನ ಚಿಂತೆಯಲ್ಲಿ ಕಣ್ಣೀರಿಡುತ್ತಿರುವ ಕುಟುಂಬ

pak
Published on

ಜೈಪುರ: ಪ್ರಿಯತಮೆಯೊಂದಿಗೆ ಕಾಲ ಕಳೆಯಲು ಆಕಯೆ ಮನೆಗೆ ಹೋದ ಯುವಕನೊಬ್ಬ ಪಾಕಿಸ್ತಾನದ ಗಡಿ ದಾಟಿ, ಪಾಕ್​ ಪೊಲೀಸರ ವಶವಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕಳೆದ ನವೆಂಬರ್​ನಲ್ಲೇ ಯುವಕ ಪಾಕ್​ಗೆ ತೆರಳಿದ್ದು ಈವರೆಗೂ ಆತನನ್ನು ವಾಪಾಸು ಕರೆಸಿಕೊಳ್ಳಲಾಗದ ಕುಟುಂಬ ಕಣ್ಣೀರು ಸುರಿಸುತ್ತಿದೆ.

ಭಾರತ - ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಕುಮಾರೊ ಕಾ ಟಿಬ್ಬಾ ನಿವಾಸಿ ಗೆಮ್ರಾ ರಾಮ್ ಮೇಘವಾಲ್ ನವೆಂಬರ್​ನಿಂದ ನಾಪತ್ತೆಯಾಗಿದ್ದಾನೆ. ಆತ ತಮ್ಮ ಹಳ್ಳಿಯ ಪಕ್ಕದ ಹಳ್ಳಿಯಲ್ಲಿದ್ದ ಪ್ರಿಯತಮೆಯ ಮನೆಗೆ ಆಗಾಗ ಹೋಗಿ ಬರುತ್ತಿದ್ದನಂತೆ. ಆ ದಿನವೂ ಕೂಡ ಅದೇ ರೀತಿ ಅಲ್ಲಿಗೆ ಹೋಗಿದ್ದಾನೆ. ಆಗ ಪ್ರಿಯತಮೆಯ ಅಪ್ಪ ಅಮ್ಮನ ಬಳಿ ಸಿಕ್ಕಿಬಿದ್ದಿದ್ದಾನೆ. ಅವರಿಂದ ತಪ್ಪಿಸಿಕೊಂಡು ಓಡಿದ ರಾಮ್​ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ.

ಪಾಕಿಸ್ತಾನಕ್ಕೆ ಹೋದ ಭಾರತೀಯನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಗಡಿ ಭದ್ರತಾ ತಂಡದ ಸಿಬ್ಬಂದಿ ಪಾಕಿಸ್ತಾನಿ ಅಧಿಕಾರಿಯೊಂದಿಗೆ ಮಾತುಕತೆ ನಡೆಸಿದ ಮೇಲೆ, ಅವರು ಯುವಕನನ್ನು ಬಂಧಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಯುವಕ ಈ ರೀತಿ ಕಾಣೆಯಾಗಿರುವ ಬಗ್ಗೆ ಆತನ ಕುಟುಂಬ ಸ್ಥಳೀಯ ಪೊಲೀಸರಿಗೆ ನವೆಂಬರ್​ನಲ್ಲೇ ದೂರು ನೀಡಿದೆ. ಆದರೆ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕುಟುಂಬ ದೂರಿದೆ. ನನ್ನ ಮಗ ಪಾಕಿಸ್ತಾನದಲ್ಲಿ ಹಿಂಸೆಗೆ ಒಳಗಾಗಿರಬಹುದು ಎಂದು ಆತನ ತಂದೆ ತಾಯಿ ಭಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರು ಮತ್ತು ಕುಟುಂಬಸ್ಥರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ಯುವಕನನ್ನು ಆದಷ್ಟು ಬೇಗ ವಾಪಾಸು ಕರೆಸುವಂತೆ ಮನವಿ ಮಾಡಿ ಬಂದಿದ್ದಾರೆ. ಈ ಕುರಿತಾಗಿ ಪಾಕಿಸ್ತಾನದೊಂದಿಗೆ ಮಾತನಾಡಿದ್ದು, ಕಾನೂನಾತ್ಮಕ ವಿಧಿ ವಿಧಾನದ ನಂತರ ಯುವಕನನ್ನು ವಾಪಾಸು ಕಳಿಸುವುದಾಗಿ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net