

ಲಖನೌ: 10-11 ವರ್ಷಕ್ಕೆ ಮಕ್ಕಳು ಏನು ಮಾಡುತ್ತಾರೆ? ಆಟ ಪಾಠ ಎನ್ನುತ್ತಾ ಸಮಯ ಕಳೆಯುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ತನ್ನ 11ನೇ ವರ್ಷಕ್ಕೇ ಮಾಡಿದ ಕೆಲಸ ಕೇಳಿದರೆ ನೀವು ಗಾಬರಿಯಾಗುತ್ತೀರ.
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದೆ. ಅಲ್ಲಿನ ವಸುಂಧರನಗರದಲ್ಲಿದ್ದ ವ್ಯಕ್ತಿಯೊಬ್ಬನ ಇಮೇಲ್ ಐಡಿಯನ್ನು ಜನವರಿ 1ರಂದು ಯಾರೋ ಹ್ಯಾಕ್ ಮಾಡಿದ್ದಾರೆ. ಅದಾದ ನಂತರ ಬೇರೆ ಬೇರೆ ಇ ಮೇಲ್ ಐಡಿಗಳಿಂದ ಆತನಿಗೆ ಬೆದರಿಕೆಯ ಇ ಮೇಲ್ಗಳು ಬಂದಿವೆ. 10 ಕೋಟಿ ಕೊಡು, ಇಲ್ಲದಿದ್ದರೆ ನಿನ್ನ ನಗ್ನ ಚಿತ್ರಗಳನ್ನು ವೈರಲ್ ಮಾಡುತ್ತೇವೆ. ನಿನ್ನನ್ನೂ ನಿನ್ನ ಕುಟುಂಬವನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಸಲಾಗಿದೆ.
ಬೆದರಿಕೆಗೆ ಹೆದರಿದ ವ್ಯಕ್ತಿ ಸೀದಾ ಪೊಲೀಸ್ ಠಾಣೆಗೆ ತೆರಳಿದ್ದು, ದೂರು ದಾಖಲಿಸಿದ್ದಾನೆ. ಇ ಮೇಲ್ ಐಡಿ ಹ್ಯಾಕ್ ಆಗಿದ್ದು, ಹ್ಯಾಕರ್ಗಳು ನನ್ನ ಪ್ರತಿದಿನದ ಕೆಲಸದ ಮೇಲೂ ಕಣ್ಣಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ತಂಡದ ಸಹಾಯದಿಂದ ಯಾವ ಐಪಿ ಅಡ್ರೆಸ್ನಿಂದ ಮೇಲ್ ಬಂದಿದೆ ಎನ್ನುವುದು ಪತ್ತೆ ಹಚ್ಚಲಾಗಿದೆ. ದೂರು ನೀಡಿದ್ದ ವ್ಯಕ್ತಿಯ ಮನೆಯ ಐಪಿ ಅಡ್ರೆಸ್ನಿಂದಲೇ ಮೇಲ್ ಹೋಗಿರುವುದು ಗೊತ್ತಾಗಿದೆ. ದೂರುದಾರನ ಮನೆಗೆ ಬಂದು ಆತನ 11 ವರ್ಷದ ಮಗನನ್ನು ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ.
ಅಂದ ಹಾಗೆ ಆ ಬಾಲಕ ಕೆಲ ದಿನಗಳ ಹಿಂದೆ ಆನ್ಲೈನ್ ಕ್ಲಾಸ್ನಲ್ಲಿಯೂ ಕೆಲ ಸೈಬರ್ ಕ್ರೈಂ ಮಾಡಿದ್ದಾಗಿ ಹೇಳಲಾಗಿದೆ. ಅದಾದ ನಂತರ ಯೂಟ್ಯೂಬ್ನಲ್ಲಿ ಹ್ಯಾಕಿಂಗ್ ಮಾಡುವುದರ ಬಗ್ಗೆ ತಿಳಿದುಕೊಂಡ ಆತ ಅದನ್ನು ತನ್ನ ಅಪ್ಪನ ಮೇಲೇ ಪ್ರಯೋಗ ಮಾಡಿದ್ದಾನೆ. (ಏಜೆನ್ಸೀಸ್)