ಪರೀಕ್ಷೆಗೆ ಸರಿಯಾಗಿ ಓದಿಲ್ಲ ಎಂದು 17 ವರ್ಷದ ಮಗಳನ್ನು ಕೊಂದ ತಂದೆ!

crime
Published on

ಜೈಪುರ(ರಾಜಾಸ್ಥಾನ): ಮಗಳು ಪರೀಕ್ಷೆಗೆ ಸರಿಯಾಗಿ ಓದಿಲ್ಲ ಎಂಬ ಕಾರಣಕ್ಕೆ ತಂದೆಯೇ ಥಳಿಸಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದ್ದು, ಇದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ.

ಪ್ರೇಮ್ ನಗರದ ನಿವಾಸಿ ಫತೇ ಮೊಹಮ್ಮದ್ (42) ತನ್ನ ಮಗಳನ್ನೇ ಹತ್ಯೆಗೈದಿರುವ ಆರೋಪಿಯಾಗಿದ್ದಾನೆ. ಘಟನೆಯ ನಂತರ ಶನಿವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

11ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳು ಪರೀಕ್ಷೆಗೆ ಓದುತ್ತಿಲ್ಲ ಎಂಬ ಆಕ್ರೋಶದಿಂದ ಥಳಿಸಿ ಕೊಂದಿರುವುದಾಗಿ ಆರೋಪಿ ಫತೇ ಮೊಹಮ್ಮದ್ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

17 ವರ್ಷ ವಯಸ್ಸಿನ ಮಗಳು ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಿಲ್ಲ ಎಂಬ ಕಾರಣಕ್ಕೆ ಕೋಪಗೊಂಡಿದ್ದ ಮೊಹಮ್ಮದ್ ದೊಣ್ಣೆಯಿಂದ ಅಮಾನವೀಯವಾಗಿ ಥಳಿಸಿ ಹತ್ಯೆ ನಡೆಸಿರುವ ಬಗ್ಗೆ ಬಾಲಕಿಯ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನನ್ವಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿರುವ ಮಾರಕಾಸ್ತ್ರವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net