ರಾಜಸ್ಥಾನದಲ್ಲಿ ಪ್ಯಾನಿಕ್ ಆಗಿದೆ ಕಾಂಗ್ರೆಸ್​: ಪತನ ಭೀತಿಯ ಅಲರಾಂ ಮೊಳಗಿಸಿದ್ದಾರೆ ನಾಯಕರು!

Ashok Gehlot 16 Feb 20
Published on

ಜೈಪುರ: ಮಧ್ಯಪ್ರದೇಶದಲ್ಲಾದಂತೆ ರಾಜಸ್ಥಾನದಲ್ಲೂ ಸರ್ಕಾರ ಪತನಗೊಳಿಸುವುದಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ನಾಯಕರು ಎಚ್ಚರಿಕೆ ಘಂಟೆ ಬಾರಿಸತೊಡಗಿದ್ದಾರೆ! ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನಾಯಕತ್ವದ ಸರ್ಕಾರವನ್ನು ಪತನಗೊಳಿಸುವುದಕ್ಕೆ ವಿಪಕ್ಷ ಬಿಜೆಪಿ ಮತ್ತೆ ಪ್ರಯತ್ನಗಳನ್ನು ಆರಂಭಿಸಿದೆ ಎಂದು ಕಾಂಗ್ರೆಸ್ ಪಕ್ಷದ 24 ಶಾಸಕರು ಶುಕ್ರವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದ್ದಾರೆ!

ಬಿಜೆಪಿಯ ಉನ್ನತ ನಾಯಕರು ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಆದರೆ ಅವರ ಪ್ರಯತ್ನ ಸಫಲವಾಗುವುದಕ್ಕೆ ಕಾಂಗ್ರೆಸ್ ಶಾಸಕರು ಬಿಡುವುದಿಲ್ಲ. ಕಳೆದ ತಿಂಗಳು ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಅಂಥದ್ದೇ ಪ್ರಯತ್ನ ಈಗ ಮತ್ತೆ ನಡೆಯುತ್ತಿರುವಂಥದ್ದು. ನಮ್ಮ ಸರ್ಕಾರವನ್ನು ಬೆಂಬಲಿಸುತ್ತಿರುವ ಶಾಸಕರನ್ನು ಸೆಳೆಯುವ ಪ್ರಯತ್ನ ಅದು. ಕಾಂಗ್ರೆಸ್ ಸರ್ಕಾರ ಇಲ್ಲಿ ಐದು ವರ್ಷದ ಅವಧಿ ಪೂರ್ಣಗೊಳಿಸಲಿದೆ. ಎಂದು ಹೇಳಿಕೆ ನೀಡಿರುವ ಶಾಸಕರು ಬಿಜೆಪಿಯ ಯಾವುದೇ ನಾಯಕರ ಹೆಸರು ಉಲ್ಲೇಖ ಮಾಡಿಲ್ಲ. ಅವರ ಹೇಳಿಕೆಗೆ ಅವರ ಸಹಿಯೊಂದಿಗೆ ಪಕ್ಷದ ಮುಖ್ಯ ವಿಪ್​ ಮಹೇಶ್ ಜೋಷಿ ಮತ್ತು ಡೆಪ್ಯುಟಿ ಚೀಫ್ ವಿಪ್​ ಮಹೇಂದ್ರ ಚೌಧರಿ ಕೂಡ ಸಹಿ ಹಾಕಿದ್ದಾರೆ.

ರಾಜಸ್ಥಾನದ ವಿಧಾನಸಭೆಯ 200 ಸ್ಥಾನಗಳ ಪೈಕಿ ಕಾಂಗ್ರೆಸ್​ ಪಕ್ಷಕ್ಕೆ 107 ಶಾಸಕರ ಬೆಂಬಲವಿದೆ. ಇದರಲ್ಲಿ ಕಾಂಗ್ರೆಸ್ ಶಾಸಕರಲ್ಲದೆ ರಾಷ್ಟ್ರೀಯ ಲೋಕದಳ, ಸಿಪಿಐ(ಎಂ), ಭಾರತೀಯ ಟ್ರೈಬಲ್ ಪಾರ್ಟಿ(ಬಿಟಿಪಿ) ಶಾಸಕರೂ ಸೇರಿಕೊಂಡಿದ್ದಾರೆ. ಬಿಜೆಪಿಯ ಬಲ ಇಲ್ಲಿ 72 ಶಾಸಕರು. ಕಳೆದ ತಿಂಗಳು ನಡೆದ ರಾಜ್ಯಸಭೆಯ ಮೂರು ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ 2, ಬಿಜೆಪಿ ಒಂದನ್ನು ಗೆದ್ದುಕೊಂಡಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net