5 ವರ್ಷದಲ್ಲಿ ರಾಜ್ಯದ 10 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ..ಇದು ಕಾಂಗ್ರೆಸ್​​ ಪಕ್ಷದ ವಾಗ್ದಾನ: ರಾಹುಲ್​​ ಗಾಂಧಿ

rahul gandhi
Published on

ಬೆಳಗಾವಿ: ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಇದು 40% ಸರ್ಕಾರವಾಗಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯ ಯುವಕ್ರಾಂತಿ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್​ ಗಾಂಧಿ ಅವರು, ಕೆಲವು ದಿನಗಳ ಹಿಂದೆ ಭಾರತ್​ ಜೋಡೋ ಯಾತ್ರೆ ಸಾಗಿತ್ತು. ಈ ಯಾತ್ರೆಗೆ ಯುವಕರು, ತಾಯಂದಿರು ಪೂರ್ಣ ಶಕ್ತಿ ತುಂಬಿದ್ದಾರೆ. ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತ್​ ಜೋಡೋ ಯಾತ್ರೆ ಇಡೀ ದೇಶಕ್ಕೆ ಸಂದೇಶ ರವಾನಿಸಿದೆ ಎಂದಿದ್ದಾರೆ.

ಯಾತ್ರೆ ವೇಳೆ ದೊಡ್ಡ..ದೊಡ್ಡ ರಥಗಳು ಇರಲಿಲ್ಲ. ಹಿಂಸೆ ಇರಲಿಲ್ಲ ಬದಲಾಗಿ ಸಹೋದರತ್ವ ಇತ್ತು. ದೇಶದ ಪ್ರತಿ ಕಡೆ ಬೆಂಬಲ ಸಿಕ್ಕಿದೆ. ಯಾತ್ರೆಯಲ್ಲಿ ಬಹಳಷ್ಟು ಜನರ ಜೊತೆ‌ ಮಾತನಾಡಿದ್ದೇನೆ. ಕರ್ನಾಟಕದಲ್ಲಿ ಕೆಲವು ಯುವಕರು ನನ್ನ ಪ್ರಶ್ನೆ ಮಾಡುತ್ತಾರೆ. ಯಾವುದೇ ಡಿಗ್ರಿ ಆದ್ರೂ ಯುವಕರಿಗೆ ಉದ್ಯೋಗ ನೀಡುತ್ತಿಲ್ಲ. ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ ಎಂದು ಕಿಡಿಕಾಡಿದ್ದಾರೆ.

ಶಾಸಕರ ಪುತ್ರ ಎಂಟು‌ ಕೋಟಿ ಜೊತೆ ಸಿಕ್ಕಿಬಿದ್ದ. ಆದರೆ ಆಢಳಿತ ಸರ್ಕಾರ ಅವರ ರಕ್ಷಣೆ ಮಾಡುತ್ತಿದೆ.ಸಾವಿರಾರು ಯುವಕರು ಯಾತ್ರೆ ವೇಳೆ ಹೇಳಿದ್ದಾರೆ. ಭ್ರಷ್ಟಾಚಾರದ ‌ಲಾಭ ಎರಡ್ಮೂರು ಜನರಿಗೆ ಆಗುತ್ತಿದೆ.ನಾನು‌ ಸಂಸತ್ತಿನಲ್ಲಿ ‌ಮಾತನಾಡಿದ್ದೇನೆ. ದೇಶದ ಎಲ್ಲ ಬ್ಯುಸಿನೆಸ್ ಮೋದಿ ಮಿತ್ರ ಅದಾನಿಗೆ ನೀಡಲಾಗುತ್ತಿದೆ. ಇದರ ಲಾಭ ಪ್ರಧಾನಿ ಮೋದಿಗೂ ಆಗಿದೆ ಎಂದು ಆರೋಪಿಸಿದ್ದಾರೆ.

ಮುಂದೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಪದವಿ ಓದಿದವರಿಗೆ ನಿರುದ್ಯೋಗ ಭತ್ಯೆಯಾಗಿ 3 ಸಾವಿರ ರೂ., ಡಿಪ್ಲೋಮಾ ಓದಿದವರಿಗೆ 1,500 ರೂ. ನೀಡಲಾಗುವುದು ಎಂದು ಕಾಂಗ್ರೆಸ್‌ ʼಯುವ ನಿಧಿʼ ಯೋಜನೆಯನ್ನು ಘೋಷಣೆ ಮಾಡಿದೆ. ಎರಡು ವರ್ಷ ನಿರುದ್ಯೋಗ ಯುವಕರಿಗೆ ಭತ್ಯೆ ನೀಡುತ್ತೇವೆ. ಯುವಕರಿಗೆ ಕಷ್ಟ ನೋಡದೆ ಈ ಗ್ಯಾರಂಟಿ ಯೋಜನೆ ತಂದಿದ್ದೇವೆ. ೧೦ ಲಕ್ಷ ಯುವಕರಿಗೆ ಐದು ವರ್ಷದಲ್ಲಿ ಉದ್ಯೋಗ ನೀಡುವ ಮೂಲಕವಾಗಿ ರಾಜ್ಯದ ಸರ್ಕಾರಿ ಉದ್ಯೋಗಗಳನ್ನು ಭರ್ತಿ‌ ಮಾಡುತ್ತೇವೆ. ಇದು‌ ಕಾಂಗ್ರೆಸ್ ಪಕ್ಷದ ವಾಗ್ದಾನ ಎಂದಿದ್ದಾರೆ.

ಈ ದೇಶ ಇಬ್ಬರ ದೇಶವಲ್ಲ.. ಅದಾನಿ ದೇಶ ಅಲ್ಲ ರೈತರು, ಮಹಿಳೆಯರು, ಯುವಕರ ದೇಶವಾಗಿದೆ. ಎಸ್ಸಿ, ಎಸ್ಟಿ ‌ಮೀಸಲಾತಿ ಈಗಾಗಲೇ ಸರ್ಕಾರ ಘೋಷಣೆ ‌ಮಾಡಿದೆ. ಈ ಘೋಷಣೆ ಮಾಡಿದ್ದನ್ನು ಸರ್ಕಾರ ‌ಪೂರ್ಣ ಮಾಡಬೇಕು. ರಾಜ್ಯದ ನಾಯಕರಿಗೆ ‌ನಾನು‌ ಭರವಸೆ ಕೊಟ್ಟಿದ್ದೇನೆ. ನೀವು ಎಲ್ಲಿಗೆ ಕರೆದರೂ‌ ನಾನು ಬರುತ್ತೇನೆ.ಎಲ್ಲೇ ಪ್ರಚಾರ ಇದ್ದರೂ ಪ್ರಚಾರಕ್ಕೆ ಬರುತ್ತೇನೆ. ಎಲ್ಲ ಸೇರಿ ಬಿಜೆಪಿ ಸೋಲಿಸೋಣ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net