

ನವದೆಹಲಿ: ತಮಗೆ ನೀಡಲಾಗಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಆದೇಶಿಸಿರುವ ಕೆಲ ಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಸಂಸದ (ರಾಜ್ಯಸಭೆ) ರಾಘವ್ ಚಡ್ಡಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆ ನಡೆಸುವಂತೆ ಅರ್ಜಿಯಲ್ಲಿ ಕೋರಲಾಗಿದ್ದು, ಬುಧವಾರ ನ್ಯಾಯಾಲಯ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ರಾಘವ್ ಚಡ್ಡಾ ಪರ ನ್ಯಾಯಾಲಯಕ್ಕೆ ದಾವೆ ಹೂಡಿದ ಅವರ ವಕೀಲರು, ಈ ಹಿಂದೆ ವಿಚಾರಣಾ ನ್ಯಾಯಾಲಯದಿಂದ ಸರ್ಕಾರಿ ಬಂಗಲೆ ಖಾಲಿ ಮಾಡುವ ಸಲುವಾಗಿ ತಡೆಯಾಜ್ಞೆ ನೀಡಲಾಗಿತ್ತು. ಆದರೆ, ಈಗ ಅದನ್ನು ಏಕಾಏಕಿ ತೆಗೆದುಹಾಕಲಾಗಿದ್ದು, ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಲಹಂತದ ನ್ಯಾಯಾಲಯ ನೀಡಿರುವ ಆದೇಶವನ್ನು ರದ್ದು ಮಾಡಬೇಕು ಮತ್ತು ಈ ಕೂಡಲೇ ಅರ್ಜಿಯ ವಿಚಾರಣೆ ನಡೆಸಬೇಕೆಂದು ವಿನಂತಿಸಿದ್ದಾರೆ.
ರಾಘವ್ ಚಡ್ಡಾ ಅವರು ರಾಜ್ಯಸಭಾ ಸಂಸದರಾಗಿ ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೆ ಈ ಬಂಗಲೆಯಲ್ಲಿ ವಾಸಿಸುವ ಹಕ್ಕಿದೆ ಎಂದು ಹೇಳಿಕೊಳ್ಳುವಂತಿಲ್ಲ. ರಾಘವ್ ಚಡ್ಡಾ ಅವರು ಸಂಸದರಾಗಿ ಅವರಿಗೆ ನೀಡಲಾದ ಸವಲತ್ತು ಮಾತ್ರವಾದ್ದರಿಂದ ಟೈಪ್ 7 ಬಂಗಲೆಯನ್ನು ಆಕ್ರಮಿಸಿಕೊಳ್ಳುವುದನ್ನು ಮುಂದುವರಿಸಲು ಅವರಿಗೆ ಯಾವುದೇ ಸ್ವಾಭಾವಿಕ ಹಕ್ಕು ಇಲ್ಲ ಎಂದು ಅಕ್ಟೋಬರ್ 5ರಂದು ಪಟಿಯಾಲ ಹೌಸ್ ಕೋರ್ಟ್ ಹೇಳಿತ್ತು.