VIDEO| ಬಾರ್​ ಒಳಗಿನ ಕನ್ನಡಿ ಒಡೆದ ಪೊಲೀಸರಿಗೆ ಶಾಕ್​: ಒಂದೇ ಕೋಣೆಯ 17 ಮಹಿಳೆಯರ ರಹಸ್ಯ ಬಯಲು!

1202412
Published on

ಮುಂಬೈ: ಇಲ್ಲಿನ ಅಂಧೇರಿ ಏರಿಯಾದಲ್ಲಿರುವ ಡಾನ್ಸ್​ ಬಾರ್​ ಮೇಲೆ ಪೊಲೀಸರು ನಡೆಸಿದ ದಾಳಿಯ ವೇಳೆ ಸ್ಫೋಟಕ ಸಂಗತಿಯೊಂದು ಬೆಳಕಿಗೆ ಬಂದಿದೆ. ರಹಸ್ಯ ಕೋಣೆಯೊಂದರಲ್ಲಿ ಕೂಡಿಟ್ಟಿದ್ದ 17 ಮಹಿಳೆಯರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಗ್ರಾಹಕರ ಮುಂದೆ ಡಾನ್ಸ್​ ಮಾಡಲು ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಸುಳಿವಿನ ಮೇರೆಗೆ ದೀಪಾ ಬಾರ್​ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದ ವೇಳೆ ಈ ಸಂಗತಿ ಬಯಲಿಗೆ ಬಂದಿದೆ.

ಬಾರ್​ ಡಾನ್ಸ್​​ ನಡೆಸುತ್ತಿದ್ದ ವ್ಯಕ್ತಿ ಮಹಿಳೆಯರನ್ನು ರಹಸ್ಯ ಕೋಣೆಯಲ್ಲಿ ಕೂಡಿಟ್ಟಿದ್ದ. ಪೊಲೀಸರು ದಾಳಿ ನಡೆಸುತ್ತಾರೆ ಎಂದು ಗೊತ್ತಾದ ಬೆನ್ನಲ್ಲೇ ಆತ ರಹಸ್ಯ ಕೋಣೆಯ ಮುಂದೆ ಸುಧಾರಿತ ಎಲೆಕ್ಟ್ರಾನಿಕ್​ ವ್ಯವಸ್ಥೆಯನ್ನು ಅಳವಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿ ನಡೆಸಿದ ಪೊಲೀಸರು ವಾಶ್​ರೂಮ್​, ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಯನ್ನು ಜಾಲಾಡಿದರು ಕೂಡ ಮಹಿಳೆಯರ ಸುಳಿವು ಪತ್ತೆಯಾಗಲಿಲ್ಲ. ಸಾಲದಕ್ಕೆ ಬಾರ್​ ಮ್ಯಾನೇಜರ್​, ವೇಟರ್​ ಮತ್ತು ಕ್ಯಾಶಿಯರ್​ ಕೂಡ ಆರೋಪವನ್ನು ನಿರಾಕರಿಸಿದ್ದರು.

ಆದರೆ, ಮೇಕಪ್​ ರೂಮ್​ನಲ್ಲಿ ಒಂದು ದೊಡ್ಡ ಕನ್ನಡಿ ನೇತು ಹಾಕಿರುವುದು ಪೊಲೀಸರ ಗಮನವನ್ನು ಸೆಳೆಯಿತು. ಅದರನ್ನು ತೆರವು ಮಾಡಲು ಪೊಲೀಸರು ಯತ್ನಿಸಿದರು ಆದರೆ, ಸಾಧ್ಯವಾಗದಿದ್ದಾಗ ಅದನ್ನು ಒಡೆದು ಹಾಕಲು ನಿರ್ಧರಿಸಿದರು. ಬಳಿಕ ಸುತ್ತಿಗೆಯಿಂದ ಕನ್ನಡಿಯನ್ನು ಹೊಡೆದಾಗ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಅಲ್ಲಿ ರಹಸ್ಯ ಕೋಣೆಯೊಂದು ಇರುವುದನ್ನು ನೋಡಿದ ಪೊಲೀಸರು, ಒಳಗೆ ನೋಡಿದಾಗ ಅಲ್ಲಿ ಮಹಿಳೆಯರು ಪತ್ತೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕನ್ನಡಿಯನ್ನು ಹೊಡೆಯುತ್ತಿರುವುದು ಮತ್ತು ರಹಸ್ಯ ಕೋಣೆಯಿಂದ ಮಹಿಳೆಯರು ಹೊರಬರುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಸದ್ಯ 17 ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ರಹಸ್ಯ ಕೋಣೆಯೊಳಗೆ ಬೆಡ್​ ಮತ್ತು ಎಸಿಯಂತಹ ಸಂಪೂರ್ಣ ಸೌಲಭ್ಯಗಳಿಂದ ಕೂಡಿತ್ತು. ಸುಳ್ಳು ಹೇಳಿದ ಮ್ಯಾನೇಜರ್​, ಕ್ಯಾಶಿಯರ್​ ಮತ್ತು ಬಾರ್​ ಸಿಬ್ಬಂದಿಯ ಮೇಲೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net