ಡಬ್ಬಿಂಗ್ ಮಾಡದ್ದಕ್ಕೆ ಇಲ್ಲಿದೆ ಕಾರಣ!; ಪುಷ್ಪ ಚಿತ್ರದ ಬಗ್ಗೆ ರಶ್ಮಿಕಾ ಎಕ್ಸ್​ಕ್ಲೂಸಿವ್ ಮಾತು..

Rashmika
Published on

ಬೆಂಗಳೂರು: ‘ಪುಷ್ಪ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗುವುದಕ್ಕೂ ಮುನ್ನ ಒಂದು ಕುತೂಹಲವಿತ್ತು. ‘ಈ ಚಿತ್ರದ ಕನ್ನಡ ಅವತರಣಿಕೆಗೆ ರಶ್ಮಿಕಾ ಅವರೇ ಡಬ್ಬಿಂಗ್ ಮಾಡಿರಬಹುದೆಂದು..’ ಆದರೆ, ಟ್ರೇಲರ್ ಹೊರಬಂದ ಮೇಲೆ ಅದು ಹುಸಿಯಾಯಿತು. ರಶ್ಮಿಕಾ ಬದಲಿಗೆ ಬೇರೊಬ್ಬ ಡಬ್ಬಿಂಗ್ ಕಲಾವಿದೆಯ ಧ್ವನಿ ಅಲ್ಲಿ ಕೇಳಿಸಿತ್ತು. ಸೋಷಿಯಲ್ ಮೀಡಿಯಾದಲ್ಲಿ ‘ರಶ್ಮಿಕಾ ಕನ್ನಡವನ್ನೇ ಮರೆತ್ರಾ..’ ಎಂದು ಸುದ್ದಿಯೂ ಆಯಿತು. ಆದರೆ, ರಶ್ಮಿಕಾ ಕನ್ನಡಕ್ಕೆ ಡಬ್ ಮಾಡದಿರುವುದಕ್ಕೆ ಕಾರಣ ಏನಿರಬಹುದು? ಆ ಪ್ರಶ್ನೆಗೆ ಸ್ವತಃ ರಶ್ಮಿಕಾ ‘ವಿಜಯವಾಣಿ’ ಜತೆಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಉತ್ತರವನ್ನೂ ನೀಡಿದ್ದಾರೆ.

‘ಪುಷ್ಪ’ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಮಾತನಾಡಿದ ರಶ್ಮಿಕಾ, ಕನ್ನಡದಲ್ಲಿ ಡಬ್ಬಿಂಗ್ ಮಾಡದಿರುವುದಕ್ಕೆ ಬೇಸರವೂ ಇದೆ ಎಂಬುದನ್ನು ಹೇಳಿಕೊಂಡಿದ್ದಾರೆ. ‘ಇತ್ತೀಚೆಗಷ್ಟೇ ‘ಪುಷ್ಪ’ ಚಿತ್ರದ ಶೂಟಿಂಗ್ ಮುಗಿದಿದೆ. ಪ್ರಚಾರ, ಪೋಸ್ಟ್ ಪ್ರೊಡಕ್ಷನ್, ಡಬ್ಬಿಂಗ್ ಸೇರಿ ಹಲವು ಕೆಲಸಗಳು ಹಗಲು ರಾತ್ರಿ ನಡೆಯುತ್ತಿವೆ. ಈ ನಡುವೆ ನಾಲ್ಕು ಸಿನಿಮಾ ಶೂಟಿಂಗ್​ನಲ್ಲಿಯೂ ನಾನು ಬಿಜಿಯಾಗಿದ್ದೇನೆ. ಅದರ ನಡುವೆಯೇ ಮೂರು ದಿನಗಳ ಕಾಲ ತೆಲುಗು ಅವತರಣಿಕೆಗೆ ಡಬ್ ಮಾಡಿದ್ದೇನೆ. ಅದೂ ಸಹ ಇನ್ನೂ ಪೂರ್ಣವಾಗಿಲ್ಲ. ಆ ಒಂದು ಕಾರಣಕ್ಕೆ ಕನ್ನಡಕ್ಕೆ ಡಬ್ ಮಾಡಲು ಆಗಿಲ್ಲ. ಕನ್ನಡಕ್ಕೂ ಡಬ್ ಮಾಡಬೇಕೆಂಬ ಆಸೆ ಇತ್ತು. ಆದರೆ, ಕೆಲಸದ ಒತ್ತಡದ ನಡುವೆ ಸಾಧ್ಯವಾಗಲಿಲ್ಲ. ಮುಂದಿನ ನನ್ನ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಕನ್ನಡಕ್ಕೆ ಖಂಡಿತ ನಾನೇ ಡಬ್ ಮಾಡ್ತೀನಿ’ ಎಂಬುದು ರಶ್ಮಿಕಾ ಮಾತು. ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ ‘ಪುಷ್ಪ’ ಸಿನಿಮಾ ಇದೇ 17ಕ್ಕೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರುತ್ತಿದೆ. ಕನ್ನಡದ ಡಾಲಿ ಧನಂಜಯ್ ಸಹ ಈ ಚಿತ್ರದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net