ಗಂಗಾ ಕಾಲುವೆಯಲ್ಲಿ 2 ಕಾರು ಪತ್ತೆ: ಅನೇಕ ತಿಂಗಳಿಂದ ನೀರಲ್ಲೇ ಮುಳುಗಿದ್ದ ಕಾರುಗಳನ್ನು ಹೊರತೆಗೆದವರಿಗೆ ಶಾಕ್​!

Car
Published on

ಮುಜಾಫರ್​ನಗರ: ಉತ್ತರ ಪ್ರದೇಶದ ಎರಡು ಪ್ರತ್ಯೇಕ ಪ್ರದೇಶಗಳಲ್ಲಿರುವ ಗಂಗಾ ನದಿಯ ಕಾಲುವೆಯಿಂದ ಹೊರತೆಗೆಯಲಾದ 2 ಕಾರುಗಳಲ್ಲಿ ಎರಡು ಮೃತಹೇಹಗಳು ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿವೆ.

ಎರಡು ದೇಹಗಳು ಕಾರಿನ ಒಳಗೆ ಪತ್ತೆಯಾಗಿವೆ. ಕಾಲುವೆಯಲ್ಲಿನ ನೀರಿನ ಮಟ್ಟ ಕಡಿಮೆಯಾಗಿ ಕಾರುಗಳ ಮೇಲ್ಮೈ ಗೋಚರವಾಗುತ್ತಿದ್ದಂತೆ ಎರಡು ಕಾರುಗಳನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿದಾಗ ಮೃತದೇಹಗಳು ಪತ್ತೆಯಾಗಿವೆ. ಮೃತರ ಗುರುತು ಸಹ ಪತ್ತೆಯಾಗಿದ್ದು, ತನಿಖೆ ಆರಂಭವಾಗಿದೆ.

ಮೃತ ಇಬ್ಬರಲ್ಲಿ ಓರ್ವ ದಿಲ್ಶಾದ್​ ಅನ್ಸಾರಿ (27). ಅನ್ಸಾರಿ ದೇಹ ಕಾರಿನ ಹಿಂಬದಿಯ ಸೀಟಿನಲ್ಲಿ ಪತ್ತೆಯಾಗಿದೆ. ಈತ ಮುಜಾಫರ್​ನಗರದ ಭಗ್ರಾ ಏರಿಯಾ ನಿವಾಸಿ. ಈ ವರ್ಷದ ಆರಂಭದಿಂದಲೂ ಅನ್ಸಾರಿ ನಾಪತ್ತೆಯಾಗಿದ್ದ. ಎಲ್ಲಿಗೂ ತೆರಳಬೇಕೆಂದು ಹೇಳಿ ಸ್ನೇಹಿತನ ಕಾರು ತೆಗೆದುಕೊಂಡು ಹೋಗಿದ್ದ ಅನ್ಸಾರಿ ಮರಳಿ ಬಂದಿರಲಿಲ್ಲ. ಈ ಸಂಬಂಧ ಅನ್ಸಾರಿ ಸಹೋದರ ವಾಜಿದ್​ ಅನ್ಸಾರಿ ನ್ಯೂ ಮಂಡಿ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಮತ್ತೊಂದು ಕಾರಿನಲ್ಲಿ ಪತ್ತೆಯಾದ ಮೃತದೇಹವನ್ನು ಹರೇಂದ್ರ ದತ್​ ಅಟ್ರೆ ಎಂದು ಗುರುತಿಸಲಾಗಿದೆ. ಇವರ ಮೃತದೇಹ ಅನ್ಸಾರಿ ಮೃತದೇಹ ಪತ್ತೆಯಾದ 55 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಕಳೆದ ಫೆಬ್ರವರಿಯಿಂದ ಅಟ್ರೆ ನಾಪತ್ತೆಯಾಗಿದ್ದರು. ಕೆಲಸದ ನಿಮಿತ್ತ ಮೀರಾಪುರ್​ಗೆ ತೆರಳಬೇಕೆಂದು ಹೇಳಿ ಬೆಳಗ್ಗೆ 7 ಗಂಟೆಗೆ ಮನೆ ಬಿಟ್ಟು ಹೋಗಿದ್ದ ಅಟ್ರೆ ಮರಳಿ ಬಂದಿರಲಿಲ್ಲ. ಕುಟುಂಬದಿಂದ ಕೊಟ್ವಾಲಿಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಇಬ್ಬರ ಮೃತದೇಹವನ್ನು ಕುಟುಂಬಸ್ಥರು ಗುರುತಿಸಿದ್ದಾರೆ. ಘಟನೆ ನಡೆದ ಅನೇಕ ತಿಂಗಳ ಬಳಿಕ ಇಬ್ಬರ ಮೃತದೇಹ ಸಿಕ್ಕಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದು ಹೇಗೆ ಸಂಭವಿಸಿದೆ ಮತ್ತು ಇದರ ಹಿಂದೆ ಬೇರೆ ಏನಾದರೂ ಕೈವಾಡ ಇದೆಯೇ ಎಂಬ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net