

ನವದೆಹಲಿ: ಟ್ವಿಟರ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಜಾಕ್ ಡಾರ್ಸಿ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಆ ಸ್ಥಾನವನ್ನು ಭಾರತೀಯರೊಬ್ಬರು ಅಲಂಕರಿಸಿದ್ದಾರೆ. ಟ್ವಿಟರ್ನ ನೂತನ ಸಿಇಒ ಆಗಿ ಭಾರತ ಮೂಲದ ಪರಾಗ್ ಅಗರವಾಲ್ ನೇಮಕಗೊಂಡಿರುವುದು ಹೆಮ್ಮೆಯ ಸಂಗತಿಯಾದರೆ, ಮತ್ತೊಂದೆಡೆ ವಿಶ್ವದ ಪ್ರಮುಖ 500 ಉನ್ನತ ಕಂಪನಿಗಳ ಸಿಇಒಗಳಲ್ಲಿ ಅಗರವಾಲ್ ಅಂತ್ಯಂತ ಕಿರಿಯ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟ್ವಿಟರ್ ಸಂಸ್ಥಾಪಕ ಮತ್ತು ಸಿಇಒ ಜ್ಯಾಕ್ ಡಾರ್ಸಿ ಉತ್ತರಾಧಿಕಾರಿಯಾಗಿ ಸೋಮವಾರ ನೇಮಕಗೊಂಡಿರುವ ಅಗರವಾಲ್ ಅವರು 37 ವರ್ಷ ವಯಸ್ಸಿನವರಾಗಿದ್ದಾರೆ. ಅಗರವಾಲ್ ಮತ್ತು Meta Platform Inc. ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ವಯಸ್ಸು ಒಂದೇ ಆಗಿದೆ. ಭದ್ರತಾ ಕಾಳಜಿ ದೃಷ್ಟಿಯಿಂದ ಟ್ವಿಟರ್ ಕಂಪನಿ ಅಗರವಾಲ್ ಅವರ ಜನ್ಮ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ ಅವರು 1984 ರಲ್ಲಿ ಜುಕರ್‌ಬರ್ಗ್ ಅವರ ಮೇ 14ರ ಜನ್ಮದಿನದ ನಂತರ ಜನಿಸಿದರು ಎಂದು ಖಚಿತಪಡಿಸಲಾಗಿದೆ. ಅಲ್ಲಿಗೆ ಜುಕರ್ಬರ್ಗ್ಗಿಂತ ಅಗರವಾಲ್ ಕಿರಿಯವರು.
ವಿಶೇಷವಾಗಿ ಈ ರೀತಿಯ ಕಂಪನಿಗಳಿಗೆ ವಯಸ್ಸಿನ ವಿಷಯವು ದೊಡ್ಡದ್ದೇನಲ್ಲ ಎಂದು ನಾನು ಭಾವಿಸುವುದಿಲ್ಲ. ಇದು ಪ್ರಯೋಜನವಾಗಬಹುದು ಎಂದು ಸಿಇಒ ಕಾರ್ಯಕ್ಷಮತೆಯನ್ನು ಅಧ್ಯಯನ ಮಾಡುವ ಸ್ಟ್ಯಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಪ್ರಾಧ್ಯಾಪಕ ಡೇವಿಡ್ ಲಾರ್ಕರ್ ಹೇಳಿದ್ದಾರೆ.
ಬ್ಲೂಬರ್ಗ್ ಡೇಟಾ ಪ್ರಕಾರ ಬರ್ಕ್ಶೈರ್ ಹಾಥ್ವೇ ಇಂಕ್. ಕಂಪನಿಯ ಸಿಇಒ ವಾರೆನ್ ಬಫೆಟ್ ಅವರು ವಿಶ್ವದ ಅಂತ್ಯಂತ ಹಿರಿಯ ಸಿಇಒ ಆಗಿದ್ದಾರೆ. ಅವರ ವಯಸ್ಸು 91 ವರ್ಷ. 500 ಅತಿದೊಡ್ಡ ಕಂಪನಿಗಳ ಸಿಇಒಗಳ ನಡುವಿನ ಸರಾಸರಿ ವಯಸ್ಸು 58 ವರ್ಷ. ಆದರೆ ಸಿಇಒ ಯುಗದಲ್ಲಿನ ವಿಶಾಲವಾದ ಪ್ರವೃತ್ತಿಯು ಇನ್ನೂ ಯುವಕರ ಪರವಾಗಿಲ್ಲ. ಏಕೆಂದರೆ, ಬಹುತೇಕ ಕಂಪನಿಗಳ ಸಿಇಒಗಳ ವಯಸ್ಸು ತುಸು ಹೆಚ್ಚಳವಿದ್ದು, ಯುವಕರ ಸಂಖ್ಯೆ ವಿರಳವಾಗಿದೆ.
ಅಗರವಾಲ್ ಅವರು 2011ರಲ್ಲಿ ಟ್ವಿಟರ್‌ಗೆ ಸೇರಿದರು. ಇದೀಗ ಬಾಂಬೆ ಐಐಟಿಯ ಪದವೀಧರನಿಗೆ ಅಂತಾರಾಷ್ಟ್ರೀಯ ಮಟ್ಟದ ಮಹತ್ವದ ಸ್ಥಾನವೊಂದು ಒಲಿದಂತಾಗಿದೆ. ನೂತನ ಸಿಇಒ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂತೋಷ ವ್ಯಕ್ತಪಡಿಸಿರುವ ಪರಾಗ್, ಕಂಪನಿ ತೋರಿರುವ ವಿಶ್ವಾಸ ಹಾಗೂ ಬೆಂಬಲದ ಕುರಿತು ಸುದೀರ್ಘ ಪತ್ರವೊಂದನ್ನು ಬರೆದು ಧನ್ಯವಾದ ತಿಳಿಸಿದ್ದಾರೆ. (ಏಜೆನ್ಸೀಸ್)