

ನವದೆಹಲಿ: ಭಾರತ ಸರ್ಕಾರದೊಂದಿಗೆ ಇತ್ತೀಚೆಗೆ ಭಾರಿ ಸಂಘರ್ಷ ಹೊಂದಿದ್ದ ಟ್ವಿಟರ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನವನ್ನು ಭಾರತೀಯರೊಬ್ಬರೇ ಅಲಂಕರಿಸಿದ್ದಾರೆ. ಟ್ವಿಟರ್ನ ನೂತನ ಸಿಇಒ ಆಗಿ ಭಾರತ ಮೂಲದ ಪರಾಗ್ ಅಗರ್ವಾಲ್ ನೇಮಕಗೊಂಡಿದ್ದಾರೆ.
ಟ್ವಿಟರ್ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಜಾಕ್ ಡಾರ್ಸಿ ಅವರು ಸಿಇಒ ಸ್ಥಾನಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪರಾಗ್ ಅಗರ್ವಾಲ್ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಬಾಂಬೆ ಐಐಟಿಯ ಪದವೀಧರನಿಗೆ ಅಂತಾರಾಷ್ಟ್ರೀಯ ಮಟ್ಟದ ಮಹತ್ವದ ಸ್ಥಾನವೊಂದು ಒಲಿದಂತಾಗಿದೆ.
ನೂತನ ಸಿಇಒ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂತೋಷ ವ್ಯಕ್ತಪಡಿಸಿರುವ ಪರಾಗ್, ಕಂಪನಿ ತೋರಿರುವ ವಿಶ್ವಾಸ ಹಾಗೂ ಬೆಂಬಲದ ಕುರಿತು ಸುದೀರ್ಘ ಪತ್ರವೊಂದನ್ನು ಬರೆದು ಧನ್ಯವಾದ ತಿಳಿಸಿದ್ದಾರೆ.